ಹಾಸನದ ವ್ಯಕ್ತಿ ಸಹಿತ ದೇಶದಲ್ಲಿ H3N2 ವೈರಸ್‌ ಸೋಂಕಿಗೆ ಇಬ್ಬರು ಬಲಿ

Update: 2023-03-10 09:52 GMT

ಹೊಸದಿಲ್ಲಿ: ಕರ್ನಾಟಕದ ಹಾಸನದ 82 ವರ್ಷ ವಯಸ್ಸಿನ ವೃದ್ಧರೊಬ್ಬರ ಸಹಿತ ದೇಶದಲ್ಲಿ H3N2 ವೈರಸ್‌ನಿಂದ ಹರಡುವ ಇನ್‌ಫ್ಲೂಯೆನ್ಝಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಸೋಂಕಿಗೆ ಮೃತಪಟ್ಟ ಇನ್ನೊಬ್ಬ ವ್ಯಕ್ತಿ ಹರ್ಯಾಣದವರಾಗಿದ್ದಾರೆ.

ಹಾಸನದ ಹಿರೇಗೌಡ ಎಂಬವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ ಮಾರ್ಚ್‌ 1 ರಂದು ಅವರು ಮೃತಪಟ್ಟಿದ್ದರು. ಅವರು ಮಧುಮೇಹ ಮತ್ತು ಹೈಪರ್‌ಟೆನ್ಶನ್‌ನಿಂದ ಬಳಲುತ್ತಿದ್ದರು.

ದೇಶದ ವಿವಿಧೆಡೆ 90 ಎಚ್‌3ಎನ್‌2 ಪ್ರಕರಣಗಳು ವರದಿಯಾಗಿದ್ದರೆ,ಎಚ್‌1ಎನ್‌1 ನ ಎಂಟು ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ವರದಿಯಾಗುತ್ತಿರುವ ಹೆಚ್ಚಿನ ಫ್ಲೂ ಪ್ರಕರಣಗಳು ಹಾಂಕಾಂಗ್‌ ವೈರಸ್‌ ಎಂದೂ ಕರೆಯಲ್ಪಡುವ ಎಚ್‌3ಎನ್‌2 ವೈರಸ್‌ನಿಂದಾಗಿದೆ. ಈ ವೈರಸ್‌ ಸೋಂಕು ಇತರ ಫ್ಲೂ ಮಾದರಿಗಳಿಗಿಂತ ಹೆಚ್ಚು ಸಮಸ್ಯೆಯೊಡ್ಡುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚುತ್ತದೆ.

ಭಾರತದಲ್ಲಿ ಇಲ್ಲಿಯ ತನಕ ಎಚ್‌3ಎನ್‌ 2 ಮತ್ತು ಎಚ್‌1ಎನ್‌1 ಸೋಂಕು ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ಕೋವಿಡ್‌ನಂತೆಯೇ ಈ ಸೋಂಕಿನಿಂದಾಗಿ ಜ್ವರ, ಕೆಮ್ಮು, ಚಳಿ, ಉಸಿರಾಟ ಸಮಸ್ಯೆ ಮತ್ತು ವೀಝಿಂಗ್‌ ಇರುತ್ತದೆ. ಅಷ್ಟೇ ಅಲ್ಲದೆ ವಾಕರಿಕೆ ಅನುಭವ, ಗಂಟಲು ನೋವು, ಮೈಕೈ ನೋವು ಮತ್ತು ಡಯರಿಯಾ ಸಮಸ್ಯೆಯೂ ಹಲವು ಸೋಂಕುಪೀಡಿತರನ್ನು ಬಾಧಿಸುತ್ತದೆ.

ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನನ್ನ ಬೆಂಬಲ: ಸಂಸದೆ ಸುಮಲತಾ ಘೋಷಣೆ 

Similar News