ನಕಲಿ ಎನ್‌ಕೌಂಟರ್ ಪ್ರಕರಣ: ಮೃತರ ಕುಟುಂಬಗಳಿಗೆ ತಲಾ ರೂ. 15 ಲಕ್ಷ ಪರಿಹಾರ ನೀಡಲು ಗುವಾಹಟಿ ಹೈಕೋರ್ಟ್ ಆದೇಶ
ಗುವಾಹಟಿ: ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ 1994 ರಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೃತರಾದ ಐದು ಮಂದಿ ವ್ಯಕ್ತಿಗಳ ಕುಟುಂಬಗಳಿಗೆ ತಲಾ ರೂ. 15 ಲಕ್ಷ ಪರಿಹಾರ ನೀಡುವಂತೆ ಗುವಾಹಟಿ ಹೈಕೋರ್ಟ್ (Gauhati HC) ಗುರುವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಅಚಿಂತ್ಯ ಮಲ್ಲ ಬುಜೊರ್ ಬರುವಾ ಮತ್ತು ರಾಬಿನ್ ಫುಕನ್ ಅವರ ಪೀಠ ಈ ಆದೇಶ ಹೊರಡಿಸಿದೆ.
ಸೇನೆಯ 18 ಪಂಜಾಬ್ ರೆಜಿಮೆಂಟ್ ನಡೆಸಿದ ಎನ್‌ಕೌಂಟರ್‌ನಲ್ಲಿ ಪ್ರಬಿನ್ ಸೊನೊವಾಲ್, ಪ್ರದೀಪ್ ದತ್ತ, ದೇಬಜಿತ್ ಬಿಸ್ವಾಸ್, ಅಖಿಲ್ ಸೊನೋವಾಲ್ ಮತ್ತು ಭಬೆನ್ ಮೊರನ್ ಎಂಬವರು ಹತ್ಯೆಗೀಡಾಗಿದ್ದರು.
ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂನ ಸದಸ್ಯರಿಂದ ನಡೆದಿತ್ತೆನ್ನಲಾದ ಟೀ ಎಸ್ಟೇಟ್ ಅಧಿಕಾರಿ ರಾಮೇಶ್ವರ್ ಸಿಂಗ್ ಎಂಬವರ ಹತ್ಯೆ ಸಂಬಂಧ ಈ ಐದು ಮಂದಿಯ ಸಹಿತ ಒಂಬತ್ತು ಮಂದಿಯನ್ನು ಸೇನೆ ಬಂಧಿಸಿತ್ತು.
2018ರಲ್ಲಿ ಸೇನೆಯ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ಓರ್ವ ಮೇಜರ್ ಜನರಲ್ ಸಹಿತ ಏಳು ಮಿಲಿಟರಿ ಸಿಬ್ಬಂದಿ ತಪ್ಪಿತಸ್ಥರು ಎಂದು ಘೋಷಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಿತಲ್ಲದೆ ಅವರಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಿದೆ.
ಗುರುವಾರ ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಾಲಯ ಅದೇ ಸಮಯ ಈ ಘಟನೆ ನಡೆದು ಹಲವು ವರ್ಷಗಳೇ ಸಂದಿರುವುದರಿಂದ ಹಾಗೂ ಯಾವುದೇ ಸಾಕ್ಷಿ ಅಥವಾ ಸಾಕ್ಷ್ಯಗಳು ಈಗ ದೊರೆಯುವ ಸಾಧ್ಯತೆಯಿಲ್ಲದಿರುವುದರಿಂದ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಘೋಷಿಸಿದೆ.
ಇದನ್ನೂ ಓದಿ: ಹಾಸನದ ವ್ಯಕ್ತಿ ಸಹಿತ ದೇಶದಲ್ಲಿ H3N2 ವೈರಸ್ ಸೋಂಕಿಗೆ ಇಬ್ಬರು ಬಲಿ