ಪ್ರತಿಭಟನಾ ಸ್ಥಳದಿಂದ ಪುಲ್ವಾಮಾ ಯೋಧರ ವಿಧವೆ ಪತ್ನಿಯರನ್ನು ತೆರವುಗೊಳಿಸಿದ ಪೊಲೀಸರು

Update: 2023-03-10 11:04 GMT

ಜೈಪುರ, ಮಾ 10 (ಪಿಟಿಐ) 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮೂವರು ಸಿಆರ್‌ಪಿಎಫ್ ಜವಾನರ ವಿಧವೆ ಪತ್ನಿಯರನ್ನು ರಾಜಸ್ಥಾನ ಪೊಲೀಸರು ಶುಕ್ರವಾರ ಮುಂಜಾನೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್  ಮನೆಯ ಹೊರಗಿನ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ ಎಂದು Theprint ವರದಿ ಮಾಡಿದೆ.

ಅವರ ಬೆಂಬಲಿಗರನ್ನು SEZ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಜೈಪುರ ಆಯುಕ್ತ ಆನಂದ್ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ತಮ್ಮ ನಿವಾಸಕ್ಕೆ ತೆರಳಿದ್ದಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರ ಈ ಕೃತ್ಯ ನಡೆದಿದೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ವಿಧವೆಯರು ಫೆಬ್ರವರಿ 28 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆರು ದಿನಗಳ ಹಿಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ನಿಯಮಗಳಲ್ಲಿ ಬದಲಾವಣೆ ಮಾಡಬೇಕು, ಅನುಕಂಪದ ಆಧಾರದ ಮೇಲೆ ತಮ್ಮ ಮಕ್ಕಳಿಗೆ ಮಾತ್ರವಲ್ಲದೇ ಸಂಬಂಧಿಕರಿಗೂ ಉದ್ಯೋಗ ಸಿಗಬೇಕು. ತಮ್ಮ ಹಳ್ಳಿಗಳಲ್ಲಿ ರಸ್ತೆಗಳ ನಿರ್ಮಾಣ ಮತ್ತು ಹುತಾತ್ಮರ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗುರುವಾರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬೇಡಿಕೆಗಳಿಗೆ ಪ್ರತಿಕ್ರಿಯಿಸಿ, ಅವರ ಮಕ್ಕಳ ಬದಲಿಗೆ ಹುತಾತ್ಮ ಯೋಧರ ಇತರ ಸಂಬಂಧಿಕರಿಗೆ ಉದ್ಯೋಗ ನೀಡುವುದು “ಸೂಕ್ತವೇ?” ಎಂದು ಟ್ವಿಟರ್‌ನಲ್ಲಿ ಕೇಳಿದರು. “ಹುತಾತ್ಮರ ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ? ಅವರ ಹಕ್ಕುಗಳನ್ನು ತುಳಿಯುವುದು ಸೂಕ್ತವೇ? ಎಂದು ಅವರು ಪ್ರಶ್ನಿಸಿದರು.

"ಮೂವರು ಮಹಿಳೆಯರನ್ನು ಪೊಲೀಸರು ರಾತ್ರೋರಾತ್ರಿ ಎತ್ತಿಕೊಂಡು ಹೋಗುವಷ್ಟರ ಮಟ್ಟಿಗೆ ಸರ್ಕಾರಕ್ಕೆ ಏಕೆ ಭಯವಾಗಿದೆ?. ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದಿಲ್ಲ. ಮಹಿಳೆಯರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜಿ ಅವರನ್ನು ಭೇಟಿಯಾಗುವಂತೆ ಮನವಿ ಮಾಡುತ್ತಿದ್ದರಷ್ಟೇ. ಅವರ ಮಾತುಗಳನ್ನು ಕೇಳಲು ಮುಖ್ಯಮಂತ್ರಿಗಳೇಕೆ ಇಷ್ಟು ಚಡಪಡಿಸುತ್ತಿದ್ದಾರೆ?" ಎಂದು ಮೀನಾ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿದರು.

Similar News