ಅದಾನಿ ಗ್ರೂಪ್ ನ ಮೂರು ಕಂಪನಿ ಶೇರುಗಳನ್ನು ಅಲ್ಪಾವಧಿ ನಿಗಾದಡಿ ಇರಿಸಿದ ಎನ್ಎಸ್ಇ

Update: 2023-03-10 11:15 GMT

ಹೊಸದಿಲ್ಲಿ: ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್ಎಸ್ಇ)ವು ಅದಾನಿ ಎಂಟರ್ಪ್ರೈಸಸ್, ಅದಾನಿ ಪವರ್ ಮತ್ತು ಅದಾನಿ ವಿಲ್ಮರ್ ಕಂಪನಿಗಳ ಶೇರುಗಳನ್ನು ಗುರುವಾರದಿಂದ ಅಲ್ಪಾವಧಿ ಹೆಚ್ಚುವರಿ ಕಣ್ಗಾವಲು ವ್ಯವಸ್ಥೆ (ಎಎಸ್ಎಂ)ಯಡಿ ಇರಿಸಿದೆ.

ಒಂದು ತಿಂಗಳ ಕಾಲ ಎಎಸ್ಎಂ ಅಡಿ ಪರಿಶೀಲನೆಗೆ ಒಳಪಟ್ಟಿದ್ದ ಅದಾನಿ ಎಂಟರ್ಪ್ರೈಸಸ್ ನ ಶೇರುಗಳನ್ನು ಬುಧವಾರವಷ್ಟೇ ಹೊರತರಲಾಗಿತ್ತು.
ಅದಾನಿ ಗ್ರೀನ್ ಎನರ್ಜಿ ಮತ್ತು ಎನ್ಡಿಟಿವಿ ಶೇರುಗಳನ್ನು ದೀರ್ಘಾವಧಿ ಎಎಸ್ಎಂ ಅಡಿ ಮೊದಲ ಹಂತದಿಂದ ಎರಡನೇ ಹಂತಕ್ಕೆ ವರ್ಗಾಯಿಸಲಾಗಿದ್ದು, ಇದು ಸಹ ಗುರುವಾರದಿಂದಲೇ ಜಾರಿಗೊಂಡಿದೆ.

ಶೇರುಗಳ ಬೆಲೆಗಳಲ್ಲಿ ಅಧಿಕ ಏರಿಳಿತಗಳ ಸಂದರ್ಭಗಳಲ್ಲಿ ಶೇರು ವಿನಿಮಯ ಕೇಂದ್ರಗಳು ಹೂಡಿಕೆದಾರರನ್ನು ಊಹಾತ್ಮಕ ವಹಿವಾಟುಗಳಿಂದ ರಕ್ಷಿಸಲು ಅಂತಹ ಶೇರುಗಳ ಮೇಲೆ ಅಲ್ಪಾವಧಿ ಅಥವಾ ದೀರ್ಘಾವಧಿ ಹೆಚ್ಚುವರಿ ಕಣ್ಗಾವಲು ಇರಿಸುತ್ತವೆ.

ಇತ್ತೀಚಿನ ವಹಿವಾಟುಗಳಲ್ಲಿ ಅದಾನಿ ಗ್ರೂಪ್ ಕಂಪನಿಗಳ ಶೇರುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಮರಳಿ ಎಎಸ್ಎಂ ಅಡಿ ಇರಿಸಲಾಗಿದೆ.
ಸರಣಿ ಧನಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಿಂದಿನ ಐದು ವಹಿವಾಟು ದಿನಗಳಲ್ಲಿ ಏರುತ್ತಲೇ ಬಂದಿದ್ದ ಅದಾನಿ ಗ್ರೂಪ್ನ ಐದು ಕಂಪನಿಗಳ ಶೇರುಗಳು ಗುರುವಾರ ಅಪ್ಪರ್ ಸರ್ಕ್ಯೂಟ್ ನಲ್ಲಿ ಲಾಕ್ ಆಗಿದ್ದರೆ, ಇತರ ಶೇರುಗಳು ನಷ್ಟ ಅನುಭವಿಸಿದ್ದವು. ಗುರುವಾರ 10 ಅದಾನಿ ಗ್ರೂಪ್ ಶೇರುಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಒಂಭತ್ತು ಲ.ಕೋ.ರೂ.ಗಳಾಗಿದ್ದವು.

ಕಳೆದ ವಾರ ಜಿಕ್ಯೂಜಿ ಪಾರ್ಟನರ್ಸ್ ನಾಲ್ಕು ಅದಾನಿ ಗ್ರೂಪ್ ಕಂಪನಿಗಳ ಶೇರುಗಳಲ್ಲಿ ಹೂಡಿಕೆ ಮಾಡಿದ ಬಳಿಕ 7,374 ಕೋ.ರೂ.ಗಳ ಶೇರು ಬೆಂಬಲಿತ ಪ್ರವರ್ತಕರ ಸಾಲಗಳನ್ನು ಅವಧಿಗೆ ಮುನ್ನವೇ ಮರುಪಾವತಿಸಿರುವುದಾಗಿ ಗ್ರೂಪ್ ಮಂಗಳವಾರ ಪ್ರಕಟಿಸಿತ್ತು. 500 ಮಿ.ಡಾ.ಗಳ ಬ್ರಿಡ್ಜ್ ಲೋನ್ ಅನ್ನೂ ಮರುಪಾವತಿಸಿರುವುದಾಗಿ ಅದು ಬುಧವಾರ ಪ್ರಕಟಿಸಿತ್ತು.

ಸಾಲ ಮರುಪಾವತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿದ್ದು ಶೇರುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿತ್ತು.

ಶುಕ್ರವಾರದ ವಹಿವಾಟಿನಲ್ಲಿ ಮಧ್ಯಾಹ್ನದ ವೇಳೆಗೆ ಅದಾನಿ ಗ್ರೀನ್,ಅದಾನಿ ಟ್ರಾನ್ಸ್ಮಿಷನ್,ಅದಾನಿ ಟೋಟಲ್ ಗ್ಯಾಸ್ನ ಶೇರುಗಳು ಅಪ್ಪರ್ ಸರ್ಕ್ಯೂಟ್ನಲ್ಲಿ ಮತ್ತು NDTV ಶೇರುಗಳು ಲೋವರ್ ಸರ್ಕ್ಯೂಟ್ನಲ್ಲಿ ಲಾಕ್ ಆಗಿದ್ದವು. ಅದಾನಿ ಪವರ್ ಹೊರತು ಪಡಿಸಿ ಇತರ ಗ್ರೂಪ್ ಕಂಪನಿಗಳ ಶೇರುಗಳ ನಷ್ಟದಲ್ಲಿದ್ದವು.

Similar News