ಚರ್ಚ್ ನಲ್ಲಿ ಗುಂಡಿನ ದಾಳಿಗೆ 8 ಮಂದಿ ಮೃತ್ಯು; ಹಲವರಿಗೆ ಗಾಯ
ಬರ್ಲಿನ್, ಮಾ.10: ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿನ ಯೆಹೋವನ್ ವಿಟ್ನೆಸ್ ಚರ್ಚ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ಮೂರು ಮಹಡಿಯ ಚರ್ಚ್ ಬಿಲ್ಡಿಂಗ್ ನ ಸಭಾಂಗಣದಲ್ಲಿ ಶೂಟೌಟ್ ನಡೆದಿದ್ದು ಪೊಲೀಸರಿಗೆ ತುರ್ತು ಕರೆಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯಿತ್ತು. ಹಲವರು ಮೃತಪಟ್ಟಿದ್ದು ಇನ್ನು ಕೆಲವರು ಗಂಭೀರ ಗಾಯಗೊಂಡಿದ್ದರು. ಚರ್ಚ್ ನ ಎರಡನೇ ಮಹಡಿಯಲ್ಲಿ ಓರ್ವ ವ್ಯಕ್ತಿ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈತ ಶಂಕಿತ ದುಷ್ಕರ್ಮಿಯಾಗಿರುವ ಸಾಧ್ಯತೆಯಿದೆ ಎಂದು ಪೊಲಿಸರು ಹೇಳಿದ್ದಾರೆ.
ಸ್ಥಳಕ್ಕೆ ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಗುಂಡಿನ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರ ಹಾಗರ್ ವೆಹ್ರೆನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.