×
Ad

ಚೀನಾ ಅಧ್ಯಕ್ಷರಾಗಿ ಕ್ಸಿಜಿಂಪಿಂಗ್ ನೇಮಕಕ್ಕೆ ಸಂಸತ್ತು ಅನುಮೋದನೆ

Update: 2023-03-10 22:19 IST

ಬೀಜಿಂಗ್, ಮಾ.10: ಚೀನಾ ಅಧ್ಯಕ್ಷರಾಗಿ ಕ್ಸಿಜಿಂಪಿಂಗ್ ಅವರನ್ನು ದಾಖಲೆ ಮೂರನೇ ಅವಧಿಗೆ ನೇಮಕಗೊಳಿಸುವ ನಿರ್ಣಯವನ್ನು  ಚೀನಾದ ಸಂಸತ್ತು ಶುಕ್ರವಾರ ಭರ್ಜರಿ ಬಹುಮತದೊಂದಿಗೆ ಅನುಮೋದಿಸಿದೆ.

ಚೀನಾದ ಅಧ್ಯಕ್ಷರಾಗಿ ಕ್ಸಿಜಿಂಪಿಂಗ್ ಅವರ ಹೆಸರನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿ ಪ್ರಸ್ತಾವಿಸಿತ್ತು. ಇತರ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಕಾರಣ ಶುಕ್ರವಾರ ಚೀನಾದ ರಬ್ಬರ್ ಸ್ಟ್ಯಾಂಪ್ ಸಂಸತ್ತಿನಲ್ಲಿ  ನಡೆದ ಮತದಾನದಲ್ಲಿ ಜಿಂಪಿಂಗ್ ಪರ 2,952 ಮತಗಳು ಚಲಾವಣೆಯಾಗಿದೆ. ಚೀನಾದ ಪ್ರಭಾವೀ ಸೆಂಟ್ರಲ್ ಮಿಲಿಟರಿ ಕಮಿಷನ್(ಸಿಎಂಸಿ)ಯ ಅಧ್ಯಕ್ಷರಾಗಿಯೂ ಜಿಂಪಿಂಗ್ ನೇಮಕಕ್ಕೆ ಅನುಮೋದನೆ ದೊರಕಿದೆ.

ಮಾವೊ ಅವರ ಅವಧಿಯಿಂದಲೂ ಚೀನಾದ ಮುಖಂಡರ ಕಾರ್ಯಾವಧಿ 2 ಅವಧಿಗೆ ಸೀಮಿತಗೊಂಡಿತ್ತು. ಈ ನಿಯಮವನ್ನು 5 ವರ್ಷದ ಹಿಂದೆ ಸಿಎಂಸಿ ಬದಲಾಯಿಸಿದ್ದು ಈ ಮೂಲಕ ಜಿಂಪಿಂಗ್ ಮೂರನೇ ಅವಧಿಯ ಆಡಳಿತಕ್ಕೆ ಮುನ್ನುಡಿ ಬರೆದಿತ್ತು. ಸಿಎಂಸಿಯ ಅಧ್ಯಕ್ಷರಾಗುವ ಮೂಲಕ ಜಿಂಪಿಂಗ್ ವಿಶ್ವದ ಬೃಹತ್ ಭೂಸೇನೆ ಎಂಬ ಹೆಗ್ಗಳಿಕೆ ಹೊಂದಿರುವ ಚೀನಾದ ಬಲಿಷ್ಟ ರಕ್ಷಣಾಪಡೆಯ ಮೇಲೆ ಪೂರ್ಣ ನಿಯಂತ್ರಣ ಹೊಂದುವಂತಾಗಿದೆ.

ಸಿಪಿಸಿ ಪಾಲಿಟ್ಬ್ಯೂರೋದ ಸದಸ್ಯರಾದ ಝಾವೊ ಲೆಝಿಯನ್ನು ಸಂಸತ್ತಿನ ನೂತನ ಅಧ್ಯಕ್ಷರನ್ನಾಗಿ ಮತ್ತು ಹಾನ್ ಝೆಂಗ್ರನ್ನು ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಕ್ಸಿಜಿಂಪಿಂಗ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಲಿ ಕ್ವಿಯಾಂಗ್ ಶನಿವಾರದ ಸಂಸತ್ ಅಧಿವೇಶನದಲ್ಲಿ ಚೀನಾದ ಪ್ರೀಮಿಯರ್ ಆಗಿ ಅನುಮೋದನೆ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.  

Similar News