×
Ad

ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆ ಅತ್ಯಗತ್ಯ: ಭಾರತ ಪ್ರತಿಪಾದನೆ

Update: 2023-03-10 22:22 IST

ವಿಶ್ವಸಂಸ್ಥೆ, ಮಾ.10: ಅಭಿವೃದ್ಧಿಶೀಲ ದೇಶಗಳು ಹಾಗೂ ಪ್ರಾತಿನಿಧ್ಯರಹಿತ ದೇಶಗಳ ಧ್ವನಿಗಳು ವಿಶ್ವಸಂಸ್ಥೆಯ ಉನ್ನತಹಂತದಲ್ಲಿ ಸರಿಯಾದ ಸ್ಥಾನ ಪಡೆಯುವಂತಾಗಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಹಾಗೂ ಶಾಶ್ವತವಲ್ಲದ ವಿಭಾಗಗಳ ವಿಸ್ತರಣೆ ಅತ್ಯಗತ್ಯವಾಗಿದೆ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.

ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯನ್ನು ರೂಪಿಸಲು ಎರಡೂ ವರ್ಗಗಳ ವಿಸ್ತರಣೆ ಏಕೈಕ ಮಾರ್ಗವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಹೇಳಿದ್ದಾರೆ. ಅಂತರ್ಸರಕಾರ ಸಂವಾದ ಕುರಿತ ವಿಶ್ವಸಂಸ್ಥೆಯ ಅಧಿವೇಶನದ  ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು `ನಮಗೆ ಇಂದು ಭೌಗೋಳಿಕ ಮತ್ತು ಅಭಿವೃದ್ಧಿಯ ವೈವಿಧ್ಯತೆಯನ್ನು ಉತ್ತಮವಾಗಿ ಪ್ರತಿನಿಧಿಸುವ ಭದ್ರತಾ ಮಂಡಳಿಯ ಅಗತ್ಯವಿದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಶ್ಯಾ ಹಾಗೂ ಪೆಸಿಫಿಕ್ ವಲಯದ ಬಹುಪಾಲು  ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಹಾಗೂ ಪ್ರಾತಿನಿಧ್ಯ ಇರದ ದೇಶಗಳ ಧ್ವನಿಗಳಿಗೆ ವೇದಿಕೆಯಾಗುವ ಅಂತರಾಷ್ಟ್ರೀಯ ವ್ಯವಸ್ಥೆಯ ಅಗತ್ಯವಿದೆ. ಇದನ್ನು ಸಾಧಿಸಬೇಕಿದ್ದರೆ 15 ಸದಸ್ಯಬಲದ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕಾಗಿದೆ' ಎಂದರು.

ಭದ್ರತಾ ಮಂಡಳಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ದೇಶಗಳು ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ವಿಶ್ವಸಂಸ್ಥೆಯಲ್ಲಿನ ಏಕೈಕ ಸ್ಥಾಪಿತ ಪ್ರಕ್ರಿಯೆಯ ಮೂಲಕ ಈ ಸುಧಾರಣೆಯನ್ನು ಸಮಯಕ್ಕೆ ಅನುಗುಣವಾಗಿ ಸಾಧಿಸಲು  ಬಹಿರಂಗ ಬೆಂಬಲ ವ್ಯಕ್ತಪಡಿಸುವಂತೆ ನಾವು ಕರೆನೀಡುತ್ತೇವೆ. ಕಳೆದ 3 ದಶಕಗಳಲ್ಲಿ ನಾವು ಮಾಡಿದ್ದು ಪರಸ್ಪರ ಮಾತುಕತೆ ಮಾತ್ರ, ಇದೀಗ ಈ ಉದ್ದೇಶ, ಗುರಿಯ ಬಗ್ಗೆ ಮಾತನಾಡುವ ಸಮಯ ಬಂದಿದೆ . ವಿಶ್ವಸಂಸ್ಥೆಯ ಸಾರ್ವತ್ರಿಕವಾಗಿ ಪ್ರತಿನಿಧಿಸುವ ವ್ಯವಸ್ಥೆಯ ಅಂಗವಾಗಿ 193 ಸದಸ್ಯರ ಸಾಮಾನ್ಯ ಸಭೆಯ ಪಾತ್ರವು ಅತ್ಯಗತ್ಯವಾಗಿದೆ. ಆದ್ದರಿಂದ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಯ ಮಧ್ಯೆ ನಿಯಮಿತ ಸಮನ್ವಯ ಮತ್ತು ಸಂವಹನವನ್ನು ನಿರ್ವಹಿಸುವುದು ಮುಖ್ಯವಾಗಿದೆ ಎಂದವರು ಒತ್ತಿಹೇಳಿದರು ಎಂದವರು ಹೇಳಿದ್ದಾರೆ.

ವಿಸ್ತರಿತ ಭದ್ರತಾ ಮಂಡಳಿಯ ಗಾತ್ರ ಮತ್ತು ಕಾರ್ಯವಿಧಾನ, ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಡುವಿನ ಸಂಬಂಧ- ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಅನೌಪಚಾರಿಕ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಭಾರತ, ಬ್ರೆಝಿಲ್, ಜರ್ಮನಿ ಮತ್ತು ಜಪಾನ್ ಈ ನಾಲ್ಕು ಜಿ4 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾರದರ್ಶಕವಾಗಿ ಕಾರ್ಯ ನಡೆಸುತ್ತಿಲ್ಲದ ಕಾರಣ ಅದರ ವಿಸ್ತರಣೆಯಾಗಬೇಕು ಎಂದು ನಿರಂತರ ಆಗ್ರಹಿಸುತ್ತಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವನ್ನು ಕನಿಷ್ಟ  20ಕ್ಕೆ  ಹೆಚ್ಚಿಸಬೇಕು. ಇದು ಪ್ರಾತಿನಿಧ್ಯ, ನ್ಯಾಯಸಮ್ಮತೆ ಮತ್ತು ಪರಿಣಾಮಕಾರಿತ್ವದ ನಡುವೆ ಸಾಕಷ್ಟು ಸಮತೋಲನವನ್ನು ಅನುಮತಿಸುತ್ತದೆ ಎಂದು ಈ ದೇಶಗಳು ಪ್ರತಿಪಾದಿಸುತ್ತಿವೆ.

ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 5 ಶಾಶ್ವತ ಸದಸ್ಯರು- ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್ ಮತ್ತು ಅಮೆರಿಕ, 10 ಚುನಾಯಿತ ಕಾಯಂ ಅಲ್ಲದ ಸದಸ್ಯರಿದ್ದಾರೆ(ಇವರ ಅಧಿಕಾರಾವಧಿ 2 ವರ್ಷಗಳು). ಭಾರತದ ಕಾಯಂ ಅಲ್ಲದ ಸದಸ್ಯತ್ವ ಕಳೆದ ಡಿಸೆಂಬರ್ ಗೆ ಅಂತ್ಯಗೊಂಡಿದೆ.

Similar News