ರಾಜಕೀಯ ಲಾಭಕ್ಕೆ ವಲಸಿಗರ ಮೇಲೆ ದಾಳಿ ವದಂತಿ ಹರಡಿದ ಬಿಜೆಪಿ: ಜೆಡಿಯು ಆರೋಪ
ಚೆನ್ನೈ, ಮಾ. 9: ರಾಜಕೀಯ ಲಾಭಕ್ಕಾಗಿ ಬಿಜೆಪಿ ವಲಸಿಗರ ಕುರಿತು ವದಂತಿ ಹಬ್ಬಿಸುತ್ತಿದೆ ಎಂದು ಜನತಾ ದಳ (ಸಂಯುಕ್ತ) ಗುರುವಾರ ಆರೋಪಿಸಿದೆ.
ದೇಶದ ಜನರು ಅವರು ಉದ್ದೇಶಗಳನ್ನು ಅರಿಯುವಷ್ಟು ಪ್ರಜ್ಞಾವಂತರಾಗಿದ್ದಾರೆ ಎಂದು ಜೆಡಿ (ಯು) ರಾಷ್ಟ್ರಾಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.
ಇದು ನಕಲಿ ಸುದ್ದಿ ಎಂದು ತಮಿಳುನಾಡು ಪೊಲೀಸರು, ರಾಜ್ಯ ಸರಕಾರದ ಅಧಿಕಾರಿಗಳು ಹಾಗೂ ಸತ್ಯ ಶೋಧಕರು ಪ್ರತಿಪಾದಿಸಿದ್ದಾರೆ. ತಪ್ಪು ಮಾಹಿತಿ ಹರಡಿರುವುದಕ್ಕೆ ಉತ್ತರಪ್ರದೇಶದ ಬಿಜೆಪಿ ವಕ್ತಾರ, ಸರಕಾರದ ಪರ ವೆಬ್‌ಸೈಟ್ ಆಪ್ ಇಂಡಿಯಾ ಹಾಗೂ ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್’ನ ಅನಾಮಿಕ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳ ಮೈತ್ರಿಗೆ ಕರೆನೀಡಿದ ಒಂದು ದಿನದ ಬಳಿಕ ಈ ಸುಳ್ಳು ಮಾಹಿತಿಯನ್ನು ಹರಡಲಾಯಿತು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಕಳೆದ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರು ಮುಖ್ಯವಾಗಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ದಾಳಿ ಹಾಗೂ ಹಲ್ಲೆಯ ವೀಡಿಯೊಗಳನ್ನು ಸಾಮಾಜಿಕ ಮಧ್ಯಮದಲ್ಲಿ ಶೇರ್ ಮಾಡಲಾಗಿತ್ತು.