ಉ.ಕೊರಿಯಾ: 73 ವರ್ಷ ಹಿಂದಿನ ಬಾಂಬ್ ಗಳ ರಾಶಿ ಪತ್ತೆ

Update: 2023-03-10 17:38 GMT

ಪ್ಯೋಂಗ್ಯಾಂಗ್, ಮಾ.10: ಉತ್ತರ ಕೊರಿಯಾದ ರಾಜಧಾನಿ ಪ್ಯೋಂಗ್ಯಾಂಗ್ನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅಗೆಯುತ್ತಿದ್ದಾಗ 1950ರ ಕೊರಿಯಾ ಯುದ್ಧದಲ್ಲಿ ಬಳಕೆಗೆ ಉದ್ದೇಶಿಸಿ ಸಂಗ್ರಹಿಸಿಡಲಾಗಿದ್ದ ಅಮೆರಿಕ ನಿರ್ಮಿತ  ಬಾಂಬ್ಗಳು, ಶೆಲ್ಗಳು, ನೆಲಬಾಂಬ್ಗಳು, ಗ್ರೆನೇಡ್ ಹಾಗೂ ಇತರ ಸ್ಫೋಟಕಗಳು ವ್ಯಾಪಕ ಪ್ರಮಾಣದಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಹ್ವಾಂಸಾಂಗ್ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣದ ಸಂದರ್ಭ ಇವು ನೆಲದಡಿ ಪತ್ತೆಯಾಗಿವೆ. ಕೆಲವು ತುಕ್ಕುಹಿಡಿದ ಸ್ಥಿತಿಯಲ್ಲಿದ್ದರೂ ಸ್ಫೋಟಗೊಳ್ಳುವ ಅಪಾಯವಿದ್ದ ಕಾರಣ ಜಾಗರೂಕತೆಯಿಂದ ಸ್ಥಳಾಂತರಿಸಿ ಅವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

1950ರಿಂದ 1953ರವರೆಗೆ ನಡೆದ ಕೊರಿಯಾ ಯುದ್ಧದ ಸಂದರ್ಭ ಅಮೆರಿಕದ ಯುದ್ಧವಿಮಾನಗಳು ಉತ್ತರ ಕೊರಿಯಾದ ವಾಯುಪ್ರದೇಶವನ್ನು ಆಕ್ರಮಿಸಿಕೊಂಡಿದ್ದು ಉತ್ತರ ಕೊರಿಯಾದ ಮೇಲೆ ಬಾಂಬ್ಗಳ ಮಳೆಸುರಿದಿದ್ದವು. ಆ ಬಳಿಕ ಕೊರಿಯಾ ಪರ್ಯಾಯ ದ್ವೀಪದ ಹಲವೆಡೆ ನೆಲದಡಿ ಸ್ಫೋಟಗೊಳ್ಳದ ಬಾಂಬ್, ಶೆಲ್, ಗ್ರೆನೇಡ್ಗಳು ಹಲವು ಬಾರಿ ಪತ್ತೆಯಾಗಿವೆ.

Similar News