×
Ad

ಗರ್ಭಿಣಿ ಸೊಸೆಗೆ ಈಡಿ ಅಧಿಕಾರಿಗಳಿಂದ ಕಿರುಕುಳ: ಲಾಲೂ ಪ್ರಸಾದ್ ಯಾದವ್ ಆರೋಪ

ಬಿಜೆಪಿಗೆ ತಲೆ ಬಾಗುವುದಿಲ್ಲ ಎಂದ RJD ಮುಖ್ಯಸ್ಥ

Update: 2023-03-11 15:52 IST

ಪಾಟ್ನಾ: ಸಾಲಕ್ಕಾಗಿ ಹಗರಣ ಪ್ರಕರಣದ ಸಂಬಂಧ ತಮ್ಮ ಪುತ್ರ ತೇಜಸ್ವಿ ಯಾದವ್‌ರ ದಿಲ್ಲಿ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ಗರ್ಭಿಣಿ ಸೊಸೆಗೆ ಕಿರುಕುಳ ನೀಡಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಲಾಲೂ ಪ್ರಸಾದ್ ಯಾದವ್, ತಮ್ಮ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ದಿಲ್ಲಿ-ಎನ್‌ಸಿಆರ್ ನಿವಾಸ ಸೇರಿದಂತೆ ತಮ್ಮ ಪುತ್ರಿಯರಾದ ಚಂದಾ, ಹೇಮ ಮತ್ತು ರಾಗಿಣಿ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ ದಾಳಿಯನ್ನು ಖಂಡಿಸಿದ್ದಾರೆ.

"ನಾವು ತುರ್ತು ಪರಿಸ್ಥಿತಿಯ ಕರಾಳ ಘಟ್ಟವನ್ನೂ ನೋಡಿದ್ದೇವೆ. ನಾವು ಆ ಯುದ್ಧದಲ್ಲೂ ಹೋರಾಡಿದ್ದೇವೆ. ಇಂದು ಆಧಾರರಹಿತ ಪ್ರತೀಕಾರದ ಪ್ರಕರಣದಲ್ಲಿ ಬಿಜೆಪಿಯ ಜಾರಿ ನಿರ್ದೇಶನಾಲಯವು ನನ್ನ ಪುತ್ರಿಯರು, ಮೊಮ್ಮಕ್ಕಳು ಹಾಗೂ ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ. ಬಿಜೆಪಿ ಇಷ್ಟು ಕೀಳು ಮಟ್ಟದ ರಾಜಕಾರಣಕ್ಕಿಳಿದು, ನಮ್ಮ ವಿರುದ್ಧ ರಾಜಕೀಯ ಹೋರಾಟ ಮಾಡಬಲ್ಲದೆ?" ಎಂದು ಪ್ರಶ್ನಿಸಿದ್ದಾರೆ.

"ಬಿಜೆಪಿಯೊಂದಿಗಿನ ನಮ್ಮ ಸೈದ್ಧಾಂತಿಕ ಹೋರಾಟ ಎಂದಿಗೂ ಇತ್ತು ಮತ್ತು ಮುಂದುವರಿಯಲಿದೆ. ನಾನು ಯಾವತ್ತೂ ಅವರಿಗೆ ತಲೆ ಬಾಗಿಸಿಲ್ಲ ಮತ್ತು ಅವರ ರಾಜಕಾರಣದೆದುರು ನನ್ನ ಕುಟುಂಬ ಮತ್ತು ಪಕ್ಷವು ಮಂಡಿಯೂರುವುದಿಲ್ಲ" ಎಂದು ಶಪಥ ಮಾಡಿದ್ದಾರೆ.

Similar News