ಪಾನ್ ಕಾರ್ಡ್-ಆಧಾರ್ ಜೋಡಣೆ ಏಕೆ ಕಡ್ಡಾಯ?

Update: 2023-03-11 12:52 GMT

ಹೊಸದಿಲ್ಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು 2023,ಮಾ.1ರೊಳಗೆ ತಮ್ಮ ಪಾನ್ (PAN) ನಂಬರ್ ಗಳನ್ನು ಆಧಾರ್ ನೊಂದಿಗೆ (Aadhaar) ಜೋಡಣೆ ಮಾಡುವಂತೆ ಎಲ್ಲ ತೆರಿಗೆದಾತರಿಗೆ ಸೂಚಿಸಿದೆ. ಇದನ್ನು ಅನುಸರಿಸದಿದ್ದರೆ 2023, ಎ.1ರಿಂದ ಪಾನ್ ನಿಷ್ಕ್ರಿಯಗೊಳ್ಳುತ್ತದೆ.

ಸೆಬಿ ಕೂಡ ಹೂಡಿಕೆದಾರರು ಶೇರು ಮಾರುಕಟ್ಟೆಯಲ್ಲಿ ವಹಿವಾಟು ಮುಂದುವರಿಸಬೇಕಿದ್ದರೆ ಮಾ.31ರೊಳಗೆ ಈ ಕಾರ್ಯವನ್ನು ಮಾಡುವಂತೆ ಸೂಚಿಸಿದೆ.

ಪಾನ್ ಮತ್ತು ಆಧಾರ್ ಜೋಡಣೆ ಹಿಂದಿನ ತಾರ್ಕಿಕತೆಯೇನು?

ಒಂದೇ ವ್ಯಕ್ತಿಗೆ ಹಲವಾರು ಪಾನ್ ಸಂಖ್ಯೆಗಳು ಅಥವಾ ಒಂದೇ ಪಾನ್ ಸಂಖ್ಯೆಯನ್ನು ಒಬ್ಬರಿಗಿಂತ ಹೆಚ್ಚಿನ ಜನರಿಗೆ ಹಂಚಿಕೆಯಾಗಿರುವ ನಿದರ್ಶನಗಳು ಬೆಳಕಿಗೆ ಬಂದ ನಂತರ ಆದಾಯ ತೆರಿಗೆ ಇಲಾಖೆಯು ಪಾನ್ ಜೊತೆ ಆಧಾರ್ ಜೋಡಣೆಯನ್ನು ಪ್ರಕಟಿಸಿತ್ತು.
ಪಾನ್ ಡೇಟಾಬೇಸ್ ನಲ್ಲಿ ಇಂತಹ ವಿದ್ಯಮಾನವನ್ನು ತಡೆಗಟ್ಟಲು ಆಧಾರ್ ಪಡೆಯಲು ಅರ್ಹ ತೆರಿಗೆದಾತರು ಪಾನ್ ಗೆ ಅರ್ಜಿಯಲ್ಲಿ ಮತ್ತು ಆದಾಯ ರಿಟರ್ನ್ ನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿದೆ.

ಪಾನ್-ಆಧಾರ್ ಜೋಡಣೆ ಯಾರಿಗೆ ಕಡ್ಡಾಯವಲ್ಲ?

​►80 ವರ್ಷ ವಯೋಮಾನಕ್ಕೆ ಮೇಲ್ಪಟ್ಟ ಯಾವುದೇ ವ್ಯಕ್ತಿ

​►ಆದಾಯ ತೆರಿಗೆ ಕಾಯ್ದೆಯಂತೆ ಅನಿವಾಸಿ ವ್ಯಕ್ತಿ

​►ಭಾರತದ ಪ್ರಜೆಯಲ್ಲದ ವ್ಯಕ್ತಿ

ಪಾನ್-ಆಧಾರ್ ಜೋಡಣೆ ಮಾಡದಿದ್ದರೆ ಏನಾಗುತ್ತದೆ?

​►ನಿಷ್ಕ್ರಿಯ ಪಾನ್ ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ

​►ಬಾಕಿಯಿರುವ ತೆರಿಗೆ ಮರುಪಾವತಿಯನ್ನು ನಿಷ್ಕ್ರಿಯ ಪಾನ್ ಗಳಿಗೆ ಮಾಡಲಾಗುವುದಿಲ್ಲ

​►ಪಾನ್ ನಿಷ್ಕ್ರಿಯಗೊಂಡರೆ ದೋಷಪೂರಿತ ರಿಟರ್ನ್ಗಳ ಪ್ರಕರಣದಲ್ಲಿ ಬಾಕಿಯಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ

​►ಪಾನ್ ನಿಷ್ಕ್ರಿಯಗೊಂಡರೆ ಅಧಿಕ ದರದಲ್ಲಿ ಆದಾಯ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ

ಇವುಗಳ ಜೊತೆಗೆ ಬ್ಯಾಂಕ್ ವಹಿವಾಟುಗಳಂತಹ ಇತರ ಹಣಕಾಸು ವಹಿವಾಟುಗಳನ್ನು ನಡೆಸುವುದು ವ್ಯಕ್ತಿಗೆ ಕಷ್ಟವಾಗಬಹುದು,ಏಕೆಂದರೆ ಈ ವಹಿವಾಟುಗಳಿಗೆ ಕೆವೈಸಿ ಪ್ರಕ್ರಿಯೆಯಲ್ಲಿ ಪಾನ್ ಪ್ರಮುಖ ಮಾನದಂಡವಾಗಿದೆ.

ಸೆಬಿ ಪಾನ್-ಆಧಾರ್ ಜೋಡಣೆ ಕಡ್ಡಾಯಗೊಳಿಸಿದ್ದು ಏಕೆ?|
ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ ಪಾನ್ ಪ್ರಮುಖ ಗುರುತಿನ ಸಂಖ್ಯೆ ಮತ್ತು ಕೆವೈಸಿ ಅಗತ್ಯಗಳ ಭಾಗವಾಗಿರುವುದರಿಂದ ಎಲ್ಲ ಸೆಬಿ ನೋಂದಾಯಿತ ಸಂಸ್ಥೆಗಳು ಮತ್ತು ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆ (ಎಂಐಐ)ಗಳು ಎಲ್ಲ ಗ್ರಾಹಕ/ಹೂಡಿಕೆದಾರರಿಗೆ ಮಾನ್ಯ ಕೆವೈಸಿಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.

ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ ಸುಗಮ ವಹಿವಾಟು ಮುಂದುವರಿಕೆಗೆ ಅಸ್ತಿತ್ವದಲ್ಲಿರುವ ಎಲ್ಲ ಹೂಡಿಕೆದಾರರು 2023,ಮಾ.31ರೊಳಗೆ ತಮ್ಮ ಪಾನ್-ಆಧಾರ್ ಜೋಡಣೆಯನ್ನು ಪೂರ್ಣಗೊಳಿಸಬೇಕು,ಇಲ್ಲದಿದ್ದರೆ ವಹಿವಾಟುಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗುತ್ತದೆ.

ಪಾನ್-ಆಧಾರ್ ಜೋಡಣೆ ಮಾಡುವುದು ಹೇಗೆ?

ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್  ( ) ನಲ್ಲಿಯ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ಕಿಸುವ ಮೂಲಕ ಪಾನ್ ಅನ್ನು ಆಧಾರ್ನೊಂದಿಗೆ ಜೋಡಣೆಗೊಳಿಸಬಹುದು.

ಇದನ್ನೂ ಓದಿ: 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪು ಹಾಸಿನ ಸ್ವಾಗತವಿರುವುದಿಲ್ಲ; ಕಾರಣವೇನು ಗೊತ್ತೆ?

Similar News