×
Ad

ಮದುವೆಗೆ ಪಾನಮತ್ತನಾಗಿ ಬಂದ ವರ: ವಧು ಮಾಡಿದ್ದೇನು ಗೊತ್ತೇ?

Update: 2023-03-11 19:08 IST

ನಲ್ಬರಿ: ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆ ದಿನದಂದೇ ಅತಿಯಾಗಿ ಕುಡಿದು ಬಂದಿದ್ದರಿಂದ ವಧು ತನ್ನ ಮದುವೆಯನ್ನು ರದ್ದುಗೊಳಿಸಿರುವ ಘಟನೆ ನಡೆದಿದೆ. ಪಾನಮತ್ತ ವರನು ವಿವಾಹದ ವಿಧಿವಿಧಾನಗಳನ್ನು ನಿರ್ವಹಿಸಲು ಕಷ್ಟ ಪಡುತ್ತಿರುವ ವೀಡಿಯೊ ಸದ್ಯ ವೈರಲ್ ಆಗಿದೆ. 

ವಿವಾಹದ ಸಂಪ್ರದಾಯಗಳ ವಿಧಿವಿಧಾನದ ವೇಳೆ ವರ ನೆಲದ ಮೇಲೆ ತೆವಳುತ್ತಿರುವ ದೃಶ್ಯ ಕೂಡಾ ವೈರಲ್ ಆಗಿದೆ. ವಿಧಾನಗಳನ್ನು ಪುರೋಹಿತರು ಹೇಳಿಕೊಡುತ್ತಿದ್ದರಾದರೂ ವರನಿಗೆ ಪುರೋಹಿತರು ಹೇಳಿದಂತೆ ಮಾಡಲು ಸಾಧ್ಯವಾಗದನ್ನು ಕಂಡು ಮದುವೆಗೆ ಆಗಮಿಸಿದವರು ಅಚ್ಚರಿಗೊಂಡರು ಎಂದು ndtv.com ವರದಿ ಮಾಡಿದೆ.
 
ವರನನ್ನು ನಲ್ಬರಿ ಪಟ್ಟಣದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. "ಮದುವೆ ಚೆನ್ನಾಗಿ ನಡೆಯುತ್ತಿತ್ತು. ಎಲ್ಲಾ ವಿಧಿವಿಧಾನಗಳನ್ನು ಮಾಡಿದ್ದೇವೆ. ನಮ್ಮ ಮನೆಯವರು ಮದುವೆಯನ್ನು ಮುಗಿಸಲು ಪ್ರಯತ್ನಿಸಿದೆವು. ಪರಿಸ್ಥಿತಿ ಉಲ್ಬಣಗೊಂಡಾಗ ಹುಡುಗಿ ಮಂಟಪದಲ್ಲಿ ಕುಳಿತುಕೊಳ್ಳದಿರಲು ನಿರ್ಧರಿಸಿದಳು. ವರನ ಕಡೆಯವರಲ್ಲಿ ಸುಮಾರು 95 ಪ್ರತಿಶತ ಮಂದಿಯೂ ಪಾನಮತ್ತರಾಗಿದ್ದರು. ನಾವು ಗಾಂವ್ ಬುರ್ಹಾ (ಅಸ್ಸಾಮಿ ಗ್ರಾಮದ ನಾಯಕ) ಅವರನ್ನು ಸಂಪರ್ಕಿಸಿ, ಪೊಲೀಸರ ಗಮನಕ್ಕೆ ತಂದಿದ್ದೇವೆ" ಎಂದು ವಧುವಿನ ಸಂಬಂಧಿಕರೊಬ್ಬರು ಹೇಳಿರುವುದಾಗಿ ndtv ವರದಿ ಮಾಡಿದೆ.
 
ವರನಿಗೆ ಕಾರಿನಿಂದ ಇಳಿಯಲೂ ಸಾಧ್ಯವಾಗುತ್ತಿರಲಿಲ್ಲ, ಆತನ ತಂದೆ ಇನ್ನಷ್ಟು ಕುಡಿದಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.
 
ಈ ವಿಲಕ್ಷಣ ಘಟನೆಯ ನಂತರ, ವಧುವಿನ ಕುಟುಂಬವು ನಲ್ಬರಿ ಪೊಲೀಸ್ ಠಾಣೆಯಲ್ಲಿ ಮದುವೆ ಸಮಾರಂಭದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ದೂರು ದಾಖಲಿಸಿದೆ.

Similar News