ನೀವು ಜೈಲಿಗೆ ಹಾಕಬಹುದು, ಆದರೆ ನನ್ನ ಚೈತನ್ಯ ಉಡುಗಿಸಲಾರಿರಿ: ಜೈಲಿನಿಂದ ಮನೀಶ್ ಸಿಸೋಡಿಯ ಟ್ವೀಟ್
ಹೊಸದಿಲ್ಲಿ, ಮಾ. 11: ನನ್ನನ್ನು ಜೈಲಿನಲ್ಲಿಟ್ಟು ತನಿಖಾ ಸಂಸ್ಥೆಯು ನನ್ನ ಚೈತನ್ಯವನ್ನು ಉಡುಗಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷ (ಆಪ್)ದ ನಾಯಕ ಮನೀಶ್ ಸಿಸೋಡಿಯ ಶನಿವಾರ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಸರಕಾರದ ಮದ್ಯ ನೀತಿಯಲ್ಲಿ ನಡೆದಿದೆಯೆನ್ನಲಾದ ಹಗರಣಕ್ಕೆ ಸಂಬಂಧಿಸಿ ಅವರನ್ನು ಸಿಬಿಐ ಕಳೆದ ತಿಂಗಳು ಬಂಧಿಸಿತ್ತು. ಸಿಬಿಐ ಕಸ್ಟಡಿ ಮುಗಿದ ಬಳಿಕ ಅವರು ಈಗ ಅವರು ಅನುಷ್ಠಾನ ನಿರ್ದೇಶನಾಲಯದ (ಇಡಿ) ಕಸ್ಟಡಿಯಲ್ಲಿದ್ದಾರೆ.
‘‘ಸರ್, ನನ್ನನ್ನು ಜೈಲಿನಲ್ಲಿ ಹಾಕುವ ಮೂಲಕ ನೀವು ನನಗೆ ಕಷ್ಟ ಕೊಡಬಹುದು. ಆದರೆ, ನೀವು ನನ್ನ ಚೈತನ್ಯವನ್ನು ಉಡುಗಿಸಲು ಸಾಧ್ಯವಿಲ್ಲ. ಬ್ರಿಟಿಶರು ಕೂಡ ಸ್ವಾತಂತ್ರ ಹೋರಾಟಗಾರರಿಗೆ ಕಷ್ಟ ಕೊಟ್ಟಿದ್ದರು, ಆದರೆ ಅವರ ಚೈತನ್ಯ ಉಡುಗಿರಲಿಲ್ಲ’’ ಎಂಬುದಾಗಿ ಸಿಸೋಡಿಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ನ್ಯಾಯಾಲಯವೊಂದು ಅವರನ್ನು ಏಳು ದಿನಗಳ ಅನುಷ್ಠಾನ ನಿರ್ದೇಶನಾಲಯದ ಕಸ್ಟಡಿಗೆ ನೀಡಿದ ಒಂದು ದಿನದ ಬಳಿಕ ಅವರು ಈ ಟ್ವೀಟ್ ಮಾಡಿದ್ದಾರೆ.
ಅನುಷ್ಠಾನ ನಿರ್ದೇಶನಾಲಯವು ಆಪ್ ನಾಯಕನನ್ನು ತಿಹಾರ್ ಜೈಲಿನಲ್ಲಿ ಎರಡು ದಿನಗಳ ಕಾಲ ಪ್ರಶ್ನಿಸಿದ ಬಳಿಕ ಗುರುವಾರ ಅವರನ್ನು ಬಂಧಿಸಿತ್ತು. ಅದಕ್ಕೂ ಮೊದಲು, ಅಂದರೆ ಫೆಬ್ರವರಿ 26ರಂದು ಸಿಬಿಐಯು ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಿತ್ತು.
ಶುಕ್ರವಾರ ಸಿಸೋಡಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅವರ ವಕೀಲರು, ಅನುಷ್ಠಾನ ನಿರ್ದೇಶನಾಲಯದ ನಡೆಯನ್ನು ಟೀಕಿಸಿದರು.
ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಜನರನ್ನು ಬಂಧಿಸುವುದನ್ನು ಅನುಷ್ಠಾನ ನಿರ್ದೇಶನಾಲಯವು ತನ್ನ ಹಕ್ಕು ಎಂಬುದಾಗಿ ಭಾವಿಸಿದೆ ಎಂದು ಅವರು ವಾದಿಸಿದರು. ‘‘ಜನರನ್ನು ಬಂಧಿಸುವುದು ಈಗ ತನಿಖಾ ಸಂಸ್ಥೆಗಳಿಗೆ ಫ್ಯಾಶನ್ ಆಗಿದೆ. ಇಂಥ ಪ್ರವೃತ್ತಿಯ ವಿರುದ್ಧ ನ್ಯಾಯಾಲಯಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದು ಸಿಸೋಡಿಯರ ವಕೀಲ ದಯನ್ ಕೃಷ್ಣ ವಿಶೇಷ ನ್ಯಾಯಾಲಯದ ಮುಂದೆ ವಾದಿಸಿದರು.
ಪಕ್ಷಕ್ಕೆ ಕೆಟ್ಟ ಹೆಸರು ತರುವುದೇ ಸರಕಾರದ ಉದ್ದೇಶ: ಆಪ್
ಮನೀಶ್ ಸಿಸೋಡಿಯರ ಇಡಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಆಪ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಏಕೈಕ ಉದ್ದೇಶ ಪಕ್ಷಕ್ಕೆ ಕೆಟ್ಟ ಹೆಸರು ತರುವುದಾಗಿದೆ ಎಂದು ಆರೋಪಿಸಿದೆ. ‘‘ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದ ಪ್ರತಿಪಕ್ಷ ನಾಯಕರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿದೆ. ಅವರ ಪೈಕಿ ಹಿಮಂತ ಬಿಸ್ವ ಶರ್ಮ, ಸುವೇಂದು ಅಧಿಕಾರಿ, ಮುಕುಲ್ ರಾಯ್, ನಾರಾಯಣ ರಾಣೆ, ಬಿ.ಎಸ್. ಯಡಿಯೂರಪ್ಪ ಮತ್ತು ಶಿವರಾಜ್ ಚೌಹಾಣ್ ಮುಂತಾದವರಿಗೆ ಅಧಿಕಾರವನ್ನೂ ನೀಡಿದೆ’’ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದರು.