ಕಿಶೋರಿಲಾಲ್ ಮೀನಾ ಬಂಧನಕ್ಕೆ ಖಂಡನೆ: ಜೈಪುರದಲ್ಲಿ ಹಿಂಸೆಗೆ ತಿರುಗಿದ ಬಿಜೆಪಿ ಪ್ರತಿಭಟನೆ
ಜೈಪುರ,ಮಾ.11: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುಲ್ವಾಮಾದ ಹುತಾತ್ಮ ಯೋಧರ ಪತ್ನಿಯರು ನಡೆಸುತ್ತಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕ ಕಿಶೋರಿಲಾಲ್ ಮೀನಾ ಅವರ ಬಂಧನವನ್ನು ಪ್ರತಿಭಟಿಸಿ ಪಕ್ಷದ ಕಾರ್ಯಕರ್ತರು ಶನಿವಾರ ಜೈಪುರದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದತ್ತ ಜಾಥಾ ನಡೆಸಿದಾಗ ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿತು. ಉದ್ರಿಕ್ತ ಪ್ರತಿಭಟನಕಾರರು ಕಲ್ಲೂತೂರಾಟ ನಡೆಸಿದರು ಹಾಗೂ ತಡೆಬೇಲಿಗಳನ್ನು ಕೆಡವಿಹಾಕಿದರು.ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ತಮ್ಮ ಕುಟುಂಬದ ಸದಸ್ಯರಿಗೆ ಉದ್ಯೋಗ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಯೋಧರ ವಿಧವಾ ಪತ್ನಿಯರು, ಕಳೆದ ಎರಡುವಾರಗಳಿಂದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವ ಜೈಪುರ ನಿವಾಸದ ಹೊರಗೆ ಧರಣಿ ನಡೆಸುತ್ತಿದ್ದರು. ಶುಕ್ರವಾರ ಅವರನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದ್ದರು ಹಾಗೂ ಅವರೆಲ್ಲರನ್ನೂ ಅವರ ನಿವಾಸಗಳ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದರು.
ಅಶೋಕ್ ಗೆಹ್ಲೋಟ್ ಅವರು ಶನಿವಾರ ಈ ಹಿಂದೆ ಸೇನಾ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ವಿಧವಾ ಪತ್ನಿಯರನ್ನು ಭೇಟಿಯಾದರು. ಸರಕಾರವು ಹುತಾತ್ಮ ಯೋಧರ ಮಕ್ಕಳಿಗಷ್ಟೇ ಉದ್ಯೋಗವನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ಫುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ವಿಧವಾ ಪತ್ನಿಯರು ಗೆಹ್ಲೋಟ್ ಅವರನ್ನು ಭೇಟಿಯಾಗಲಿಲ್ಲ.
ಈ ಪೊಲೀಸ್ ಕಾರ್ಯಾಚರಣೆಯು ಹುತಾತ್ಮ ಯೋಧರ ವಿಧವಾ ಪತ್ನಿಯರಿಗೆ ಮಾಡಿದ ಅವಮಾನವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಮಧ್ಯೆ ಟೊಂಕ್ ನಗರಕ್ಕೆ ಭೇಟಿ ನೀಡಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿಕೆಯೊಂದನ್ನು ನೀಡಿ, ಹುತಾತ್ಮ ಯೋಧರ ವಿಧವಾ ಪತ್ನಿಯರ ವಿಷಯವನ್ನು ಸಂವೇದನೆಯೊಂದಿಗೆ ಆಲಿಸಲಾಗುವುದೆಂದು ತಿಳಿಸಿದರು.
‘‘ ರಸ್ತೆಗಳು, ಮನೆಗಳ ನಿರ್ಮಾಣ ಹಾಗೂ ಪ್ರತಿಮೆಗಳ ಸ್ಥಾಪನೆಯಂತಹ ವಿಧವಾ ಮಹಿಳೆಯರ ಬೇಡಿಕೆಗಳನ್ನು ನಾವು ಈಡೇರಿಸಬಹುದೆಂದು ನಾನು ಈಗಲೂ ನಂಬಿದ್ದೇನೆ. ಹುತಾತ್ಮ ಯೋಧರ ವಿಧವಾ ಪತ್ನಿಯರ ಬೇಡಿಕೆಗಳನ್ನು ಆಲಿಸಲು ನಾವು ಸಿದ್ಧರಿಲ್ಲವೆಂಬ ಸಂದೇಶವು ಹೊರಗೆ ಹೋಗಕೂಡದು. ಅವರು ಮಂಡಿಸಿದ ವಿಷಯಗಳನ್ನು ನಾವು ಒಪ್ಪಲಿ ಅಥವಾ ಇಲ್ಲದೆ ಇರಲಿ, ಅಹಮಿಕೆಯನ್ನು ಬದಿಗಿಟ್ಟು ಅವರ ಬೇಡಿಕೆಗಳಿಗೆ ಕಿವಿಗೊಡಬೇಕಾಗಿದೆ’’ ಎಂದು ಹೇಳಿದ್ದಾರೆ.