×
Ad

ಆಟೊ ಮೇಲೆ ಪೈಪ್ ಬಿದ್ದು ತಾಯಿ- ಮಗಳು ಮೃತ್ಯು

Update: 2023-03-12 08:25 IST

ಮುಂಬೈ: ಕಟ್ಟಡ ನಿರ್ಮಾಣ ಸ್ಥಳವೊಂದರದಲ್ಲಿ ಸೀಲಿಂಗ್ ಸ್ಲ್ಯಾಬ್‌ಗೆ ಆಧಾರವಾಗಿ ನೀಡಿದ್ದ ಪೈಪ್ ಆಟೊರಿಕ್ಷಾವೊಂದರ ಮೇಲೆ ಬಿದ್ದು, ಅದರಲ್ಲಿ ಪ್ರಮಾಣಿಸುತ್ತಿದ್ದ ಮಹಿಳೆ ಹಾಗೂ ಒಂಬತ್ತು ವರ್ಷದ ಬಾಲಕಿ ಮೃತಪಟ್ಟ ಘಟನೆ ಪೂರ್ವ ಜೋಗೇಶ್ವರಿಯಲ್ಲಿ ಶನಿವಾರ ನಡೆದಿದೆ.

ಮೃತಪಟ್ಟವರನ್ನು ಶಮಾ ಬಾನೊ ಆಸೀಫ್ ಶೇಖ್ (28) ಮತ್ತು ಆಯತ್ (9) ಎಂದು ಗುರುತಿಸಲಾಗಿದೆ. ಶಮಾ ಬಾನೊ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಶ್ಚಿಮ ಎಕ್ಸ್‌ಪ್ರೆಸ್ ಹೈವೇಯ ಶಲ್ಯಕ್ ಆಸ್ಪತ್ರೆ ಬಳಿ ಕೊಳಗೇರಿ ಪುನರ್ವಸತಿ ಪ್ರಾಧಿಕಾರಕ್ಕೆ ಸೇರಿದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ದೊಡ್ಡ ಪೈಪ್, ನಾಲ್ಕನೇ ಅಥವಾ ಐದನೇ ಮಹಡಿಯಿಂದ ಆಟೊರಿಕ್ಷಾ ಮೇಲೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆ ಬದಿ ನಿಂತಿದ್ದವರು ತಕ್ಷಣ ಇಬ್ಬರನ್ನೂ ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಿದ್ದರು. ಮಹಿಳೆ ಆಸ್ಪತ್ರೆಗೆ ಬರುವ ವೇಳೆಗಾಗಲೇ ಮೃತಪಟ್ಟಿದ್ದರೆ, ಬಾಲಕಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ತಲೆಗೆ ತೀವ್ರ ಗಾಯವಾಗಿದ್ದ ಮಗು ಆಂತರಿಕ ಸ್ರಾವ ಹಾಗೂ ಹಲವು ಕಡೆ ಮುರಿತದ ಗಾಯಗಳಿಂದಾಗಿ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಗು ಕೊನೆಯಸಿರೆಳೆದಿದೆ.

ಸಂಬಂಧಪಟ್ಟವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗುತ್ತದೆ. ಯಾವ ಮಹಡಿಯಿಂದ ಪೈಪ್ ಬಿದ್ದಿದೆ ಹಾಗೂ ಯಾರು ಇದಕ್ಕೆ ಹೊಣೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Similar News