ಲಂಡನ್-ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿದ್ದಲ್ಲದೆ ಬಾಗಿಲು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯ ಬಂಧನ
ಮುಂಬೈ: ಲಂಡನ್-ಮುಂಬೈ ಏರ್ ಇಂಡಿಯಾ ವಿಮಾನದ ಬಾತ್ ರೂಮ್‌ನಲ್ಲಿ ಧೂಮಪಾನ ಮಾಡಿದ್ದಲ್ಲದೆ ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
ಪ್ರಯಾಣಿಕನನ್ನು ಅಮೆರಿಕ ಪ್ರಜೆ 37 ವರ್ಷದ ರಮಾಕಾಂತ್ ಎಂದು ಗುರುತಿಸಲಾಗಿದೆ.
ಮಾರ್ಚ್ 11 ರಂದು ನಡೆದಿರುವ ಘಟನೆಯಲ್ಲಿ ವ್ಯಕ್ತಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದ ಎಂದು ವಿಮಾನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ರಮಾಕಾಂತ್ ವಿರುದ್ಧ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಮದ್ಯಪಾನದ ಸ್ಥಿತಿಯಲ್ಲಿದ್ದರೇ ಅಥವಾ ಮಾನಸಿಕವಾಗಿ ಸಮಸ್ಯೆಗೀಡಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮಾರ್ಚ್ 4 ರಂದು ಕೋಲ್ಕತ್ತಾ-ಹೊಸದಿಲ್ಲಿ ಏರ್ ಇಂಡಿಯಾ ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡುತ್ತಿದ್ದಾಗ ಒಬ್ಬ ಪ್ರಯಾಣಿಕ ಸಿಕ್ಕಿಬಿದ್ದಿದ್ದಾನೆ. ವ್ಯಕ್ತಿಯೊಬ್ಬ ವಾಶ್‌ರೂಮ್‌ನೊಳಗೆ ಸಿಗರೇಟು ಹಚ್ಚಿದಾಗ ಹೊಗೆ ಹೊರಬಂದಿತು. ಆಗ ಸಿಬ್ಬಂದಿ ಜಾಗೃತರಾಗಿದ್ದರು. ಲ್ಯಾಂಡಿಂಗ್ ಬಳಿಕ ಪ್ರಯಾಣಿಕನನ್ನು ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪ್ರಯಾಣಿಕನನ್ನು ಅನಿಲ್ ಮೀನಾ ಎಂದು ಗುರುತಿಸಲಾಗಿದೆ.