ಹೋಳಿ ಘಟನೆ: ಭಾರತ ತೊರೆದ ಜಪಾನ್ ಯುವತಿ ಟ್ವೀಟ್‌ನಲ್ಲಿ ಹೇಳಿದ್ದೇನು?

Update: 2023-03-12 07:39 GMT

ಹೊಸದಿಲ್ಲಿ: ಬುಧವಾರ ಹೋಳಿ (Holi) ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವಕರ ಗುಂಪೊಂದು ಜಪಾನ್ (Japan) ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯ ಕುರಿತು 'ಭಯಾನಕ' ಎಂದು ಸರಣಿ ಟ್ವೀಟ್ ಮಾಡಿರುವ ಆ ಯುವತಿ, ಘಟನೆಯು ದುರದೃಷ್ಟಕರವಾಗಿದ್ದು, ನಾನು ನನ್ನ 35 ಗೆಳೆಯರೊಂದಿಗೆ ಹಬ್ಬವನ್ನು ಆಚರಿಸಿದೆ ಎಂದೂ ಜಪಾನಿ ಭಾಷೆಯಲ್ಲಿ ಬರೆದುಕೊಂಡಿದ್ದಾಳೆ ಎಂದು ndtv.com ವರದಿ ಮಾಡಿದೆ.

"ಭಾರತದ ಹಬ್ಬವಾದ ಹೋಳಿ ಸಂದರ್ಭದಲ್ಲಿ ಮಹಿಳೆಯರು ಬೆಳಗ್ಗಿನ ಹೊತ್ತು ಒಂಟಿಯಾಗಿ ಓಡಾಡುವುದು ಅಪಾಯಕಾರಿ ಎಂದು ನಾನು ಕೇಳಿದ್ದು, ಹೀಗಾಗಿ ನಾನು ನನ್ನ 35 ಗೆಳೆಯರೊಂದಿಗೆ ಆ ಹಬ್ಬದಲ್ಲಿ ಭಾಗವಹಿಸಿದೆ" ಎಂದು ಹೇಳಿದ್ದಾಳೆ.

ಭಾರತದ ಕುರಿತು ತನ್ನ ಪ್ರೀತಿಯನ್ನು ಹಂಚಿಕೊಂಡಿರುವ ಜಪಾನ್ ಯುವತಿಯು, "ನಾನು ಭಾರತದ ಎಲ್ಲವನ್ನೂ ಪ್ರೀತಿಸುತ್ತೇನೆ. ನಾನು ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಅದು ಅದ್ಭುತ ದೇಶವಾಗಿದೆ. ಭಾರತ ಮತ್ತು ಜಪಾನ್ ಎಂದಿಗೂ ಸ್ನೇಹಿತರಾಗಿರುತ್ತವೆ" ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.

ಗುರುವಾರ ಆ ವಿಡಿಯೊವನ್ನು ಟ್ವೀಟ್ ಮಾಡಿದ್ದ ಯುವತಿಯು, ಕೂಡಲೇ ಅದನ್ನು ಅಳಿಸಿ ಹಾಕಿದ್ದಳು. ಈ ಕುರಿತು ಪ್ರತಿಕ್ರಿಯಿಸಿರುವ ಆಕೆ, ವಿಡಿಯೊಗೆ ಬಂದ ಪ್ರತಿಕ್ರಿಯೆಗಳಿಂದ ಹೆದರಿಕೆಯಾಗಿ, ನಾನು ಆ ಟ್ವೀಟ್ ಅನ್ನು ಅಳಿಸಿ ಹಾಕಿದೆ ಎಂದೂ ಬರೆದುಕೊಂಡಿದ್ದಾಳೆ.

ಘಟನೆಯ ಕುರಿತು ಜಪಾನ್ ಯುವತಿಯು ಇನ್ನೂ ದೂರು ದಾಖಲಿಸಿಲ್ಲವಾದರೂ, ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆ ಯುವತಿಯು ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ.

ಇದನ್ನೂ ಓದಿ: ಗುಡಿಸಲಿಗೆ ಬೆಂಕಿ, ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನ

Similar News