×
Ad

’ಸ್ಫೋಟಕ್ಕೆ ಸಜ್ಜಾದ ಟೈಂಬಾಂಬ್’ ಎಂದು ಕರೆಸಿಕೊಂಡ ವ್ಯಕ್ತಿ ಕಳೆದುಕೊಂಡ ತೂಕ ಎಷ್ಟು ಗೊತ್ತೇ?

Update: 2023-03-12 11:47 IST

ಮಿಸಿಸಿಪ್ಪಿ: ಸುಮಾರು 300 ಕೆ.ಜಿ. ತೂಕ ಹೊಂದಿದ್ದ ವ್ಯಕ್ತಿಯೊಬ್ಬರನ್ನು ವೈದ್ಯರು ಇನ್ನು ಹೆಚ್ಚು ಕಾಲ ಬದುಕುವುದು ಅಸಾಧ್ಯ; ಈತ ’ಸ್ಫೋಟಕ್ಕೆ ಸಜ್ಜಾದ ಟೈಂಬಾಂಬ್’ ಎಂದು ಘೋಷಿಸಿದ್ದರು. ಆದರೆ ಆ ವ್ಯಕ್ತಿ ವೈದ್ಯರ ನಿರೀಕ್ಷೆಯನ್ನು ಹುಸಿ ಮಾಡಿ ನಾಲ್ಕು ವರ್ಷಗಳಲ್ಲಿ 165 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಾನು ಬದುಕಲೇಬೇಕು ಎಂಬ ಛಲದಿಂದ ಈ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾಗಿ ಡಬ್ಲ್ಯುಡಿಎಎಂ 7 ವರದಿ ಮಾಡಿದೆ.

ನಿಕೋಲರಸ್ ಕ್ರಾಫ್ಟ್ ಎಂಬ ವ್ಯಕ್ತಿ 2019ರಲ್ಲಿ ತಮ್ಮ ತೂಕ ಇಳಿಕೆ ಕಸರತ್ತು ಆರಂಭಿಸಿದ್ದರು. ಮೊದಲ ತಿಂಗಳು ಆಹಾರ ಪಥ್ಯದಿಂದ 18 ಕೆ.ಜಿ. ತೂಕ ಇಳಿಸಿಕೊಂಡಿದ್ದರು. "ಹೈಸ್ಕೂಲ್‌ನಲ್ಲಿದ್ದಾಗಲೇ 136 ಕೆ.ಜಿ. ತೂಕ ಇದ್ದ ನನಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು" ಎಂದು ಫೋಕ್ಸ್ ನ್ಯೂಸ್ ಡಿಜಿಟಲ್ ಜತೆ ಮಾತನಾಡಿದ 42 ವರ್ಷ ವಯಸ್ಸಿನ ನಿಕೋಲಸ್ ಹೇಳಿದ್ದಾರೆ.

"ಖಿನ್ನತೆ ನನ್ನನ್ನು ಅಧಿಕವಾಗಿ ತಿನ್ನುವಂತೆ ಮಾಡಿತ್ತು; ನಾನು ಅತ್ತಿತ್ತ ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮೈ ಕೈ ನೋವು, ಮೊಣಕಾಲು ನೋವು ಮತ್ತು ಉಸಿರಾಟದ ಸಮಸ್ಯೆ ಎದುರಾಗಿತ್ತು. ಸಾಮಾನ್ಯ ವಾಹನಗಳಿಗೆ ಹತ್ತಲು ಕೂಡಾ ಆಗುತ್ತಿರಲಿಲ್ಲ" ಎಂದು ವಿವರಿಸಿದ್ದಾರೆ. ತೂಕದ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದೇ ಮನೆಯಿಂದ ಹೊರ ಹೋಗುವುದನ್ನೂ ನಿಲ್ಲಿಸಿದ್ದರು.

ಮೂರರಿಂದ ಐದು ವರ್ಷದೊಳಗೆ ಯಾವುದೇ ಕ್ಷಣದಲ್ಲಿ ಈತ ಸಾಯಬಹುದು ಎಂದು ವೈದ್ಯರು ಹೇಳಿದ್ದರು. ಇದು ಕ್ರಾಫ್ಟ್ ಅವರ ಮನಃಸ್ಥಿತಿ ಬದಲಾವಣೆಗೆ ಕಾರಣವಾಯಿತು. ಧೀರ್ಘ ಕಾಲ ಬದುಕಬೇಕು ಎಂಬ ಛಲದಿಂದ ಆಹಾರ ಪದ್ಧತಿ ಬದಲಿಸಿದರು. ಜಂಕ್ ಫುಡ್ ತ್ಯಜಿಸಿ ಕ್ಯಾಲೋರಿ ಸೇವನೆ ಕಡಿಮೆ ಮಾಡಿಕೊಂಡರು. ದಿನಕ್ಕೆ 1200 ರಿಂದ 1500 ಕ್ಯಾಲೋರಿಯಷ್ಟು ತಿನ್ನುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳಲ್ಲಿ 165 ಕೆ.ಜಿ. ತೂಕ ಇಳಿಸಿಕೊಂಡ ಬಳಿಕ ಅವರ ಉಸಿರಾಟದ ಸಮಸ್ಯೆ ನಿವಾರಣೆಯಾಗಿದ್ದು, ಪ್ರಯಾಣಕ್ಕೆ ಇದ್ದ ಅಡಚಣೆಯೂ ನಿವಾರಣೆಯಾಗಿದೆ!

Similar News