ಅಸ್ಸಾಂ: ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದು 'ಕುಖ್ಯಾತ ದರೋಡೆಕೋರ' ಅಲ್ಲ ರೈತ!

ತನಿಖೆಯಿಂದ ಬಹಿರಂಗ

Update: 2023-03-12 12:36 GMT

ಗುವಾಹಟಿ: ಅಸ್ಸಾಂ (Assam) ಪೊಲೀಸರು ಕಳೆದ ತಿಂಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ವ್ಯಕ್ತಿ, ಪೊಲೀಸರು ಹೇಳಿಕೊಂಡಂತೆ ’ಕುಖ್ಯಾತ ದರೋಡೆಕೋರ’ ಅಲ್ಲ, ಆತ ವಾಸ್ತವವಾಗಿ ರೈತ ಎಂಬ ಅಂಶ ಇದೀಗ ಬಹಿರಂಗವಾಗಿದೆ ಎಂದು timesofindia ವರದಿ ಮಾಡಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆದೇಶಿಸಿದ ತನಿಖೆಯಿಂದ ಈ ಅಂಶ ದೃಢಪಟ್ಟಿದೆ. ವ್ಯಕ್ತಿಯನ್ನು ತಪ್ಪಾಗಿ ಗುರುತಿಸಿದ್ದರಿಂದ ಈ ಪ್ರಮಾದ ನಡೆದಿದೆ ಎಂದು ಹೇಳಲಾಗಿದೆ.

ಸಿಐಡಿ ನಡೆಸಿದ ತನಿಖೆಯ ಪ್ರಕಾರ, ಮೃತ ವ್ಯಕ್ತಿ ಕುಖ್ಯಾತ ದರೋಡೆಕೋರ ಕೆನರಾಮ್ ಬೋರೊ ಅಲಿಯಾಸ್ ಕೆನರಾಂ ಬಸುಮಾತರಿ ಅಲ್ಲ, ಬದಲಾಗಿ ದಿಂಬೇಶ್ವರ ಮುಚಹರಿ ಎಂಬ ಸಣ್ಣ ರೈತ ಎನ್ನುವುದು ತಿಳಿದು ಬಂದಿದೆ. ಆದರೆ ದಿಂಬೇಶ್ವರ ಕೂಡಾ ಅಪರಾಧ ಹಿನ್ನೆಲೆ ಹೊಂದಿದ್ದ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಫೆಬ್ರವರಿ 24ರಂದು ಉದಲ್ಗುರಿ ಎಂಬಲ್ಲಿ ಇಬ್ಬರು ವ್ಯಕ್ತಿಗಳು ತಮ್ಮತ್ತ ಗುಂಡು ಹಾರಿಸಿದ್ದರು ಎಂದು ಪೊಲೀಸರು ಹೇಳಿಕೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಒಬ್ಬ ಡಕಾಯಿತನನ್ನು ಹತ್ಯೆ ಮಾಡಿರುವುದಾಗಿ ಮತ್ತು ಆತನ ಸಹಚರ ಪರಾರಿಯಾಗಿದ್ದಾಗಿ ಪೊಲೀಸರು ಹೇಳಿಕೆ ನೀಡಿದ್ದರು.

ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ವ್ಯಕ್ತಿ ಕೆನರಾಂ ಎಂಬ ಕುಖ್ಯಾತ ದರೋಡೆಕೋರನಾಗಿದ್ದು, ಆತನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆತನ ತಾಯಿ ಮೃತದೇಹ ಪತ್ತೆ ಮಾಡಿದ್ದಾಗಿ ಮತ್ತು ಕುಟುಂಬದವರು ಆ ಬಳಿಕ ಶವಸಂಸ್ಕಾರ ನಡೆಸಿದ್ದಾಗಿ ಹೇಳಿದ್ದರು. ಆ ಬಳಿಕ ಇನ್ನೊಂದು ಕುಟುಂಬದವರು ಹೇಳಿಕೆ ನೀಡಿ, ಮೃತ ವ್ಯಕ್ತಿ ಕೆನರಾಂ ಅಲ್ಲ; ಬದಲಾಗಿ ದಿಂಬೇಶ್ವರ ಎಂಬ ವ್ಯಕ್ತಿ ಎಂದು ಪ್ರತಿಪಾದಿಸಿದ್ದರು. ಡಿಎನ್‌ಎ ವಿಶ್ಲೇಷಣೆಯಿಂದ ಮೃತ ವ್ಯಕ್ತಿ ದಿಂಬೇಶ್ವರ ಎನ್ನುವುದು ದೃಢಪಟ್ಟಿದೆ.

ಇದನ್ನೂ ಓದಿ: 'ಸಿಲಿಂಡರ್ ಬೆಲೆ ಕಡಿಮೆ ಮಾಡ್ರಿ...': ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ನಳಿನ್ ಕುಮಾರ್ ಕಟೀಲ್​ಗೆ ಮಹಿಳೆಯಿಂದ ತರಾಟೆ

Similar News