ಹೋಳಿ: ರಸ್ತೆಯಲ್ಲಿ ನಡೆದು ಹೋಗುತ್ತಿರುವ ಬುರ್ಕಾಧಾರಿ ಮಹಿಳೆಗೆ ವಾಟರ್‌ ಬಲೂನ್‌ ಎಸೆಯುವ ವಿಡಿಯೋ ವೈರಲ್

'ನಾಚಿಕೆಗೇಡು' ಎಂದ ಸುಪ್ರೀಂ ಕೋರ್ಟ್ ನಿವೃತ್ತ‌ ನ್ಯಾಯಾಧೀಶ

Update: 2023-03-12 16:42 GMT

ಹೊಸದಿಲ್ಲಿ: ಹೋಳಿ ಆಚರಣೆ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾಧಾರಿ ಮಹಿಳೆಗೆ ತಲೆಗೆ ನೀರು ತುಂಬಿದ ಬಲೂನ್‌ ಅನ್ನು ಎಸೆದಿದ್ದಾರೆ ಎಂದು ತೋರುವ ವಿಡಿಯೋ ಒಂದನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಹಂಚಿಕೊಂಡಿದ್ದು, ಘಟನೆಗೆ ಆಕ್ಷೇಪವೆತ್ತಿದ್ದಾರೆ. 

“ಹೋಳಿ ಆಚರಿಸುವ ರೀತಿ ಇದೇನಾ? ಇಂತಹ ಘಟನೆಗಳು ನಮಗೆಲ್ಲ ಅವಮಾನ” ಎಂದು ಮಾರ್ಕಾಂಡೇಯ ಕಾಟ್ಜು ಟ್ವೀಟ್‌ ಮಾಡಿದ್ದಾರೆ. 

ಕಾಟ್ಜು ಹಂಚಿಕೊಂಡಿರುವ ವಿಡಿಯೋದಲ್ಲಿ, “ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹೋಳಿ ಆಚರಣೆಯಲ್ಲಿ ತೊಡಗಿದ್ದಾರೆ ಎನ್ನಲಾದ ಹುಡುಗರು ವಾಟರ್‌ ಬಲೂನ್‌ ಅನ್ನು ತಲೆಗೆ ಎಸೆಯುವುದು ಕಂಡು ಬಂದಿದೆ. ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದೆ, ಸೀದಾ ನಡೆದುಕೊಂಡು ಹೋಗುತ್ತಾರೆ. ಕನಿಷ್ಠ ಮೂರು ಬಾರಿ ವಾಟರ್‌ ಬಲೂನ್‌ ಎಸೆಯವುದು ವಿಡಿಯೋದಲ್ಲಿ ಕಂಡು ಬಂದಿದೆ. ಮೂರನೇ ಎಸೆತಕ್ಕೆ ಮಹಿಳೆಯ ಕೈಯಲ್ಲಿದ್ದ ಲಕೋಟೆ ಕೆಳಗೆ ಬಿದ್ದಿದ್ದು, ಅದನ್ನು ಎತ್ತಿಕೊಂಡು ಮಹಿಳೆ ನೇರ ನಡೆದು ಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ. ಹೋಲಿ ಆಚರಿಸುವವರ ಈ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅದಾಗ್ಯೂ, ವೈರಲ್‌ ಆಗಿರುವ ವಿಡಿಯೋ ಇತ್ತೀಚಿನದ್ದೇ ಅಥವಾ ಹಳೆಯದ್ದೇ ಎನ್ನುವುದು ಸ್ಪಷ್ಟವಾಗಿಲ್ಲ

ಇಂತಹದ್ದೇ ಘಟನೆಯೊಂದರಲ್ಲಿ, ಜಪಾನ್‌ ಮೂಲದ ಮಹಿಳೆ ಒಬ್ಬರಿಗೆ ಹೋಳಿ ಆಚರಣೆ ನೆಪದಲ್ಲಿ ದೌರ್ಜನ್ಯ ನಡೆದಿರುವ ಘಟನೆಯೂ ದಿಲ್ಲಿಯಲ್ಲಿ ನಡೆದಿದ್ದು, ಈ ಘಟನೆಗೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Similar News