ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲು

Update: 2023-03-12 17:09 GMT

ಮುಂಬೈ, ಮಾ. 12: ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಚಿಮೂರ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕನ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. 

ತನ್ನ ಪತಿಗೆ ಥಳಿಸಲಾಗಿದೆ ಹಾಗೂ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಮಹಿಳೆಯೋರ್ವರು ದೂರು ನೀಡಿದ ಬಳಿಕ ಪೊಲೀಸರು ಬಿಜೆಪಿ ಶಾಸಕ ಕೀರ್ತಿ ಕುಮಾರ್ ಆಲಿಯಾಸ್ ಬಂಟಿ ಭಂಗ್ದಿಯಾ  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಭಂಗ್ದಿಯಾ ಹಾಗೂ 15ರಿಂದ 20 ಜನರಿದ್ದ ಗುಂಪು ಶನಿವಾರ ತಡ ರಾತ್ರಿ ತನ್ನ ಮನೆ ಪ್ರವೇಶಿಸಿತು. ತನ್ನ ಪತಿಯನ್ನು ನಿಂದಿಸಿತು. ಆತನನ್ನು ಮನೆಯಿಂದ ಹೊರಗೆಳೆದು ಥಳಿಸಿತು. ಆತನನ್ನು ರಕ್ಷಿಸಲು ಪ್ರಯತ್ನಿಸಿದಾಗ ತನಗೆ ಲೈಂಗಿಕ ಕಿರುಕುಳ ನೀಡಿತು ಹಾಗೂ ಥಳಿಸಿತು ಎಂದು ಎಫ್‌ಐಆರ್‌ನಲ್ಲಿ ಮಹಿಳೆ ಆರೋಪಿಸಿದ್ದಾರೆ.  

ಚಿಮೂರ್ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪತಿ ಸಹೋದರನೊಂದಿಗೆ ಇಬ್ಬರು ಮಕ್ಕಳು ಸೇರಿದಂತೆ ತನ್ನ ಕುಟುಂಬದ ಸದಸ್ಯರಿಗೂ  ಬಿಜೆಪಿ ಶಾಸಕ ಹಾಗೂ ಅವರ ತಂಡ ಥಳಿಸಿದೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಶಾಸಕ ಕೀರ್ತಿಕುಮಾರ್ ಪ್ರತಿ ದೂರು ಸಲ್ಲಿಸಿ ಮಹಿಳೆಯ ಪತಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ತಾಯಿಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Similar News