×
Ad

ಪ್ರಧಾನಿಯೇ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ, ಹೀಗಾಗಿಯೇ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ: ಕಾಂಗ್ರೆಸ್

"ನಿಮ್ಮ ನೀತಿಗಳ ನಿಂದನೆ ದೇಶದ ನಿಂದನೆಯಾಗಿದ್ದು ಯಾವಾಗಿನಿಂದ?"

Update: 2023-03-13 10:22 IST

ಹೊಸದಿಲ್ಲಿ: ಬ್ರಿಟನ್‌ನಲ್ಲಿ ರಾಹುಲ್ ಗಾಂಧಿ ನೀಡಿರುವ  ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ  ನಡೆಸಿರುವ  ವಾಗ್ದಾಳಿಗೆ  ಕಾಂಗ್ರೆಸ್ ರವಿವಾರ ತಿರುಗೇಟು ನೀಡಿದೆ, ಪ್ರಧಾನಿಯವರ ನೀತಿಗಳ ನಿಂದನೆಯು  ದೇಶದ ನಿಂದನೆಯಾಗಿದ್ದು ಯಾವಾಗಿನಿಂದ ? ಎಂದು ಪ್ರಶ್ನಿಸಿದೆ.

"ಪ್ರಧಾನಿಯೇ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ.  ಹೀಗಾಗಿಯೇ  ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ'' ಎಂದು ವಿರೋಧ ಪಕ್ಷ ಕಾಂಗ್ರೆಸ್ ಹೇಳಿದೆ.

ಕರ್ನಾಟಕದಲ್ಲಿ ಜನರನ್ನುದ್ದೇಶಿಸಿ  ಮಾತನಾಡುತ್ತಾ ಲಂಡನ್‌ನಲ್ಲಿ ರಾಹುಲ್  ಗಾಂಧಿಯವರ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಇದು 12 ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರಿಗೆ, ಕರ್ನಾಟಕದ ಜನರಿಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳಿಗೆ ಹಾಗೂ  ಅದರ ನಾಗರಿಕರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದರು.

ಪ್ರಧಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಧ್ಯಮ ಹಾಗೂ  ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ(Pawan Khera), ಈ ದೇಶದ ಹಿರಿಯರು ಹಾಗೂ  ಪೂರ್ವಜರನ್ನು ನಿಂದಿಸುವ ಮೂಲಕವೇ  ಪ್ರಧಾನಿ ಒಂಬತ್ತು ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ ಎಂದು ಹೇಳಿದ್ದಾರೆ.

"ಕಳೆದ 70 ವರ್ಷಗಳಲ್ಲಿ ಏನೂ ಆಗಿಲ್ಲ ಎಂದು ಹೇಳುತ್ತಿರುವ ನೀವು (ಪ್ರಧಾನಿ) ಮೂರು ತಲೆಮಾರುಗಳನ್ನು ಅವಮಾನಿಸಿದ್ದೀರಿ, ನೀವು ದೇಶದ ಘನತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಸಂಸತ್ತಿನಲ್ಲಿ 'ಏಕ್ ಅಕೇಲಾ ಸಬ್ ಪರ್ ಭಾರಿ' ಎಂದು ಬೆನ್ನು ತಟ್ಟಿಕೊಳ್ಳುತ್ತೀರಿ, ಜಗತ್ತು ಅದನ್ನು ನೋಡುತ್ತದೆ, ನೋಡಿ ನಗುತ್ತದೆ ಕೂಡಾ" ಎಂದು ಖೇರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹಿಂದಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನೀವು ದೇಶದ ಮಾಧ್ಯಮಗಳ ಮೇಲೆ ಕೆಂಗಣ್ಣು ಬೀರಿದಾಗ ಹಾಗೂ ವಿದೇಶಿ ಮಾಧ್ಯಮಗಳ ಮೇಲೆ ದಾಳಿ ಮಾಡಿದಾಗ, ನೀವು ದೇಶದ ಘನತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಧಾನಮಂತ್ರಿಗಳೇ, ನೀವು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತೀರಿ ಹಾಗೂ  ಅದಕ್ಕಾಗಿಯೇ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮುಂದೆ ಪ್ರಜಾಪ್ರಭುತ್ವದ ಸವಾಲುಗಳನ್ನು ಚರ್ಚಿಸಿದರೆ ಅದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಯತ್ನವಾಗಿದೆ ”ಎಂದು ಕಾಂಗ್ರೆಸ್ ನಾಯಕ ಹೇಳಿದರು.

ನಿಮ್ಮ ಬಗ್ಗೆ ನಿಮಗೆ ಕೆಲವು ಅನುಮಾನಗಳಿವೆ. ನೀವು ಕೇವಲ ಪ್ರಧಾನಿ, ನೀವು ದೇವರಲ್ಲ, ನೀವು ಸೃಷ್ಟಿಕರ್ತ ಅಲ್ಲ, ನಿಮ್ಮಿಂದ ಸೂರ್ಯೋದಯವಾಗುವುದಿಲ್ಲ ... ನಿಮ್ಮ ಬಗ್ಗೆ ಈ ಅನುಮಾನಗಳನ್ನು ತೊಡೆದುಹಾಕಿ ”ಎಂದು ಖೇರಾ  ಹೇಳಿದರು.

ಇದನ್ನೂ ಓದಿ: ಹಾವೇರಿ: ಗರ್ಭಿಣಿ ಶ್ವಾನಕ್ಕೆ ರಕ್ತದಾನ ಮಾಡಿದ ಮತ್ತೊಂದು ಶ್ವಾನ

Similar News