ನಾವು ಅದಾನಿ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಮೈಕ್‌ಗಳು ಸ್ವಿಚ್‌ ಆಫ್‌ ಆಗುತ್ತವೆ: ಮಲ್ಲಿಕಾರ್ಜುನ ಖರ್ಗೆ

Update: 2023-03-13 09:06 GMT

ಹೊಸದಿಲ್ಲಿ: “ಮೋದಿ ಜಿ ಅಡಿಯಲ್ಲಿ ಕಾನೂನು ಹಾಗೂ  ಪ್ರಜಾಪ್ರಭುತ್ವದ ಆಡಳಿತವಿಲ್ಲ. ಅದಾನಿ ಷೇರುಗಳ ವಿಚಾರದಲ್ಲಿ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ನಾವು ಈ ವಿಷಯವನ್ನು ಎತ್ತಿದಾಗಲೆಲ್ಲಾ ಮೈಕ್‌ಗಳ ಸ್ವಿಚ್ ಆಫ್ ಮಾಡಲಾಗುತ್ತದೆ ಹಾಗೂ  ಸದನದಲ್ಲಿ ಗದ್ದಲ ಸ್ಫೋಟಗೊಳ್ಳುತ್ತದೆ''  ಎಂದು ಎಎಪಿ ಹಾಗೂ  ಬಿಆರ್‌ಎಸ್ ಸದಸ್ಯರ ಉಪಸ್ಥಿತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

"ಸದನದ (ರಾಜ್ಯಸಭೆ) ಭಾಗವೇ ಇಲ್ಲದವರ ಬಗ್ಗೆ ಅವರು ಹೇಗೆ ಪ್ರಶ್ನೆಗಳನ್ನು ಕೇಳುತ್ತಾರೆ? ಸಭಾ ನಾಯಕರು 10 ನಿಮಿಷಗಳ ಕಾಲ ಮಾತನಾಡಿದರು ಹಾಗೂ ಪ್ರತಿಪಕ್ಷಗಳ ನಾಯಕನಿಗೆ ಕೇವಲ 2 ನಿಮಿಷಗಳನ್ನು ನೀಡಲಾಯಿತು. ಇದು ಯಾವ ನಿಯಮ? ಇದು ಪ್ರಜಾಪ್ರಭುತ್ವದ ಅಂತ್ಯ. ಅದನ್ನೇ ಅವರು (ರಾಹುಲ್ ಗಾಂಧಿ) ಸೆಮಿನಾರ್‌ನಲ್ಲಿ ಹೇಳಿದರು'' ಎಂದು ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕನಾಗಿರುವ ಖರ್ಗೆ ಹೇಳಿದರು.

  ಬಜೆಟ್ ಅಧಿವೇಶನದ ಎರಡನೇ ಹಂತವು ಬಿಜೆಪಿ ಹಾಗೂ  ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳೊಂದಿಗೆ ಬಿರುಸಿನ ಆರಂಭಕ್ಕೆ ಕಾರಣವಾಯಿತು. ಲಂಡನ್‌ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಬಿಜೆಪಿಯು ವಾಗ್ದಾಳಿ ನಡೆಸಿದರೆ, ಪ್ರತಿಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು "ಸರ್ವಾಧಿಕಾರ" ಎಂದು ಕರೆದವು.

ಲೋಕಸಭೆಯಲ್ಲಿ ಮಾತನಾಡಿದ  ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಈ ಸದನದ ಸದಸ್ಯರಾಗಿರುವ ರಾಹುಲ್ ಗಾಂಧಿ ಲಂಡನ್‌ನಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಯನ್ನು ಈ ಸದನದ ಎಲ್ಲ ಸದಸ್ಯರು ಖಂಡಿಸಬೇಕು ಮತ್ತು ಸದನದ ಮುಂದೆ ಕ್ಷಮೆಯಾಚಿಸಲು ಅವರನ್ನು ಕೇಳಬೇಕು ಎಂದು ನಾನು ಒತ್ತಾಯಿಸುತ್ತೇನೆ'' ಎಂದರು.

ಈ ಮಧ್ಯೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, "(ನಾನು) ಸದನದಲ್ಲಿ ಮಾತನಾಡುವುದನ್ನು ಯಾರನ್ನೂ ತಡೆದಿಲ್ಲ" ಎಂದು ಹೇಳಿದ್ದಾರೆ.

 ಕಳೆದ ವಾರ ಬ್ರಿಟಿಷ್ ಸಂಸತ್ತಿನಲ್ಲಿ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿಯವರು, ಭಾರತೀಯ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ ಎಂದು ಹೇಳಿದ್ದರು.

Similar News