ಮುಂಬೈ: ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ ಹಿಂದುತ್ವ ರ‍್ಯಾಲಿ

Update: 2023-03-13 09:02 GMT

ಮುಂಬೈ: ಇಲ್ಲಿಗೆ ಸಮೀಪದ ಮೀರಾ ರೋಡ್‌ ಎಂಬಲ್ಲಿ ಹಲವು ಹಿಂದುತ್ವ ಸಂಘಟನೆಗಳು ಸಕಲ್‌ ಹಿಂದು ಸಮಾಜ್‌ ಎಂಬ ವೇದಿಕೆಯಡಿ ಆಯೋಜಿಸಿದ್ದ ಹಿಂದು ಜನ್‌ ಆಕ್ರೋಶ್‌ ಮೋರ್ಚಾ, ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು 'ಲವ್‌ ಜಿಹಾದ್‌' ಮತ್ತು 'ಭೂ ಜಿಹಾದ್‌' ವಿರುದ್ಧವೂ ಕಿಡಿಕಾರಿದ್ದಾರೆ.

"ಇಸ್ಲಾಮಿಕ್‌ ಆಕ್ರಮಣದ ಮೂರು ಪ್ರಮುಖ ಅಂಶಗಳಿವೆ. ಮೊದಲನೆಯದು 'ಲವ್‌ ಜಿಹಾದ್‌', ಎರಡನೆಯದು 'ಭೂ ಜಿಹಾದ್‌' ಮತ್ತು ಅಂತಿಮವಾಗಿ ಮತಾಂತರ ಸಮಸ್ಯೆ," ಎಂದು ರ್ಯಾಲಿಯಲ್ಲಿ ಭಾಗವಹಿಸಿದವರಲ್ಲೊಬ್ಬರಾದ ಕಾಜಲ್‌ ಹಿಂದುಸ್ತಾನಿ ಹೇಳಿದರು. "ಈ ಮೂರು ಸಮಸ್ಯೆಗಳಿಗೆ ರಾಮ-ನೇತೃತ್ವದ ಪರಿಹಾರವಿದೆ, ಈ ಪರಿಹಾರಕ್ಕೆ ನಿಮ್ಮನ್ನು ರಾಜಕೀಯ ನೇತಾರರು, ಸುಪ್ರೀಂ ಕೋರ್ಟ್‌ ಮತ್ತು ಮಾಧ್ಯಮ ಕೂಡ ತಡೆಯುವುದಿಲ್ಲ ಮತ್ತು ಆ ಪರಿಹಾರ ಅವರ ಆರ್ಥಿಕ ಬಹಿಷ್ಕಾರವಾಗಿದೆ," ಎಂದು ಆಕೆ ಹೇಳಿದ್ದಾಗಿ scroll.in ವರದಿ ಮಾಡಿದೆ.

ಶಾಸಕ ನಿತೇಶ್‌ ರಾಣೆ, ವಿಹಿಂಪ, ಬಜರಂಗದಳ ನಾಯಕರು ಮತ್ತಿತರರು ಭಾಗವಹಿಸಿದ್ದರು. ರ್ಯಾಲಿಯನ್ನು ಮೀರಾ ಭಾಯಂದರ್‌ ಪಕ್ಷೇತರ ಶಾಸಕಿ ಗೀತಾ ಜೈನ್‌ ಉದ್ಘಾಟಿಸಿದರು.

ಮಹಾರಾಷ್ಟ್ರದ ವಿವಿಧೆಡೆ ನವೆಂಬರ್‌ ತಿಂಗಳಿನಿಂದ ಇಂತಹ ಹಲವು ರ್ಯಾಲಿಗಳು ನಡೆದಿವೆ ಹಾಗೂ ಬಹುತೇಕ ಎಲ್ಲಾ ರ್ಯಾಲಿಗಳಲ್ಲಿ ಭಾಷಣಕಾರರು ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿದ್ದಾರೆ.

ಯಾವುದೇ ದ್ವೇಷದ ಭಾಷಣ ಮಾಡಬಾರದು ಎಂಬ ಷರತ್ತಿನೊಂದಿಗೆ ಈ ಗುಂಪಿನ ಒಂದು ರ್ಯಾಲಿಗೆ ಅನುಮತಿ ನೀಡಬೇಕೆಂದು ಫೆಬ್ರವರಿಯಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ಮುಸ್ಲಿಮರ ಆರ್ಥಿಕ ಬಹಿಷ್ಕಾರವನ್ನು ತಾವು ಬೆಂಬಲಿಸುವುದಾಗಿ ರಾಣೆ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಹೇಳಿದರು.

"ಆ ಹಣವನ್ನೆಲ್ಲಾ ಅವರು ಹಿಂದು ಸಮುದಾಯದ ವಿರುದ್ಧ ಬಳಸುತ್ತಾರೆ. ಆ ಹಣವನ್ನು ಅವರ ಸಮುದಾಯದ ಅಭ್ಯುದಯಕ್ಕೆ ಬಳಸಿದ್ದರೆ ಸಮಸ್ಯೆಯಿಲ್ಲ, ಆದರೆ ಉಗ್ರವಾದ, ಲವ್‌ ಜಿಹಾದ್‌ ಮತ್ತು ಹಿಂದುಗಳ ವಿರುದ್ಧದ ಅನೇಕ ವಿಷಯಗಳಿಗೆ ಅವರು ಬಳಸುತ್ತಾರೆ," ಎಂದು ಅವರು ಆರೋಪಿಸಿದರು.

Similar News