ಕಳೆದ 30 ವರ್ಷಗಳಲ್ಲಿ ದೇಶದಲ್ಲಿ ಒಳಚರಂಡಿ, ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ 1,035 ಮಂದಿ ಸಾವು

Update: 2023-03-15 09:23 GMT

ಹೊಸದಿಲ್ಲಿ: ದೇಶದಲ್ಲಿ 1993 ರಿಂದೀಚೆಗೆ ಒಳಚರಂಡಿ ಮತ್ತು ಸೆಪ್ಟಿಕ್‌  ಟ್ಯಾಂಕ್‌ಗಳನ್ನು (sewers) ಸ್ವಚ್ಛಗೊಳಿಸುವ ಸಂದರ್ಭ 1,035 ಜನರು ಮೃತಪಟ್ಟಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ಸಾಮಾಜಿಕ ನ್ಯಾಯ ಸಚಿವಾಲಯ ಮಾಹಿತಿ ನೀಡಿದೆ.

ಈ 1035 ಮಂದಿಯ ಪೈಕಿ 948 ಮೃತರ ಕುಟುಂಬಗಳಿಗೆ ಕಳೆದ 30 ವರ್ಷ ಅವಧಿಯಲ್ಲಿ ಪರಿಹಾರ ಒದಗಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್‌ ಅಥಾವಳೆ  ಅವರು ತೃಣಮೂಲ ಕಾಂಗ್ರೆಸ್‌ ಸಂಸದೆ ಮಿಮಿ ಚಕ್ರವರ್ತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ತಿಳಿಸಿದರು.

ದೇಶದಲ್ಲಿ 1993 ರಿಂದೀಚೆಗೆ ಒಳಚರಂಡಿ ಮತ್ತು ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸುವ ಸಂದರ್ಭ ಮೃತಪಟ್ಟವರ ಪೈಕಿ 104 ಮಂದಿಯ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೊಳಿಸದೇ ಇರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಸಂಸದೀಯ ಸ್ಥಾಯಿ ಸಮಿತಿ ಪ್ರಶ್ನಿಸಿತ್ತು.

ಇದೀಗ ಅಥವಾಳೆ ಅವರ ಉತ್ತರ ಗಮನಿಸಿದಾಗ ಪರಿಹಾರ ಪಡೆಯಲು ಬಾಕಿಯಿರುವ ಕುಟುಂಬಗಳ ಸಂಖ್ಯೆ 87ಕ್ಕೆ ಇಳಿಕೆಯಾಗಿದೆ ಎಂದು ತಿಳಿದು ಬರುತ್ತದೆ.

ಈ ಕೆಲಸ ಮಾಡುವಾಗ ಮೃತಪಟ್ಟವರ ಕುಟುಂಬಗಳಿಗೆ ರೂ 10 ಲಕ್ಷ ಪರಿಹಾರ ಒದಗಿಸಬೇಕೆಂದು 2014 ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ ಪ್ರಕರಣ ದಾಖಲು

Similar News