ವಿಪರೀತ ತಾಪಮಾನ ಏರಿಕೆ: ತೆಲಂಗಾಣ ಶಾಲೆಗಳಲ್ಲಿ ಇಂದಿನಿಂದ ಅರ್ಧ ದಿನದ ತರಗತಿಗಳು
ಹೈದರಾಬಾದ್: ರಾಜ್ಯವು ವಿಪರೀತ ತಾಪಮಾನ ಏರಿಕೆಯನ್ನು ಅನುಭವಿಸುತ್ತಿರುವುದರಿಂದ, ಇಂದಿನಿಂದ ರಾಜ್ಯದಾದ್ಯಂತ ಅರ್ಧ ದಿನದ ತರಗತಿಗಳನ್ನು ಜಾರಿಗೊಳಿಸುವುದಾಗಿ ತೆಲಂಗಾಣ (Telangana) ಸರ್ಕಾರ ಪ್ರಕಟಿಸಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಸೋಮವಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು, "ಮಾರ್ಚ್ 15ರಿಂದ ಕೆಲಸದ ಕೊನೆಯ ದಿನವಾದ ಏಪ್ರಿಲ್ 24, 2023ರವರೆಗೆ ಅರ್ಧ ದಿನದ ತರಗತಿಗಳು ನಡೆಯಲಿವೆ ಎಂದು ಈ ಮೂಲಕ ರಾಜ್ಯದಲ್ಲಿನ ಶಾಲಾ ಶಿಕ್ಷಣದ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಆಡಳಿತ ಮಂಡಳಿಗಳಡಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಕಾರ್ಯನಿರ್ವಹಿಸಲಿವೆ. ಮಧ್ಯಾಹ್ನದ ಬಿಸಿಯೂಟವನ್ನು ಮಧ್ಯಾಹ್ನ 12.30ಕ್ಕೆ ಒದಗಿಸಲಾಗುವುದು ಎಂದೂ ಅಧಿಕೃತ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹೀಗಿದ್ದೂ, ಹತ್ತನೆ ತರಗತಿಗೆ ನಡೆಯಲಿರುವ ಸಾರ್ವತ್ರಿಕ ಪರೀಕ್ಷೆಗೆ ಸಿದ್ಧವಾಗಲು ನಡೆಯುತ್ತಿರುವ ವಿಶೇಷ ತರಗತಿಗಳು ಮುಂದುವರಿಯಲಿವೆ. ಹತ್ತನೆ ತರಗತಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಶಾಲೆಗಳು ಮಧ್ಯಾಹ್ನ 1ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2022ರಲ್ಲೂ ಕೂಡಾ ರಾಜ್ಯದಲ್ಲಿ ತಾಪಮಾನ ಏರಿಕೆಯಾದ ಹಿನ್ನೆಲೆಯಲ್ಲಿ 2021-22ರ ಶೈಕ್ಷಣಿಕ ವರ್ಷದ ಮಾರ್ಚ್ 15ರಿಂದ ಕೊನೆಯ ಕೆಲಸದ ದಿನದವರೆಗೆ ಅರ್ಧ ದಿನದ ತರಗತಿಗಳನ್ನು ನಡೆಸುವುದಾಗಿ ತೆಲಂಗಾಣ ಸರ್ಕಾರ ಪ್ರಕಟಿಸಿತ್ತು.