'Digi Yatra' ಲಾಭರಹಿತ ಖಾಸಗಿ ಕಂಪನಿಯ ಯೋಜನೆ, RTI ವ್ಯಾಪ್ತಿಗೆ ಬರುವುದಿಲ್ಲ: ನಾಗರಿಕ ವಿಮಾನ ಯಾನ ಸಚಿವಾಲಯ
ಹೊಸದಿಲ್ಲಿ: 'ಡಿಜಿ ಯಾತ್ರಾ' (Digi Yatra) ಯೋಜನೆ ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿ ಬರದಿರುವುದರಿಂದ, ಡಿಜಿ ಯಾತ್ರಾ ಕುರಿತ ಮಾಹಿತಿಯನ್ನು ಮಾಹಿತಿ ಹಕ್ಕು ಅಥವಾ ಮಾಹಿತಿ ಹಕ್ಕು ಅರ್ಜಿಯ ಮೂಲಕ ಪಡೆಯಲು ಸಾಧ್ಯವಿಲ್ಲ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಹೇಳಿದೆ ಎಂದು thewire.in ವರದಿ ಮಾಡಿದೆ.
ಸಚಿವಾಲಯದ ಪ್ರಕಾರ, ಡಿಜಿ ಯಾತ್ರಾ ಯೋಜನೆಯು ಪಾಲುದಾರಿಕೆ ಹೊಂದಿರುವ ವಿಮಾನ ನಿಲ್ದಾಣಗಳ ಖಾಸಗಿ ಲಾಭರಹಿತ ಅಂಗವಾಗಿದೆ ಎಂಬ ಸಂಗತಿಯನ್ನು 'MediaNama' ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ತಿಳಿಸಿದೆ. "ಕೋರಿರುವ ಮಾಹಿತಿಗಳನ್ನು ಡಿಜಿ ಯಾತ್ರಾ ಪ್ರತಿಷ್ಠಾನದಿಂದ ಪಡೆಯಬಹುದಾಗಿದೆ. ಹೀಗಿದ್ದೂ, ಅವರು ಮಾಹಿತಿ ಹಕ್ಕು ಕಾಯ್ದೆ, 2005ಕ್ಕೆ ಒಳಪಡುವುದಿಲ್ಲ" ಎಂದೂ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.
ವಿಮಾನ ಪ್ರಯಾಣ ಬೆಳೆಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಲು ಪ್ರಯಾಣಿಕರ ಮುಖ ಗುರುತು ಸೆರೆ ಹಿಡಿಯುವ ಬಯೋಮೆಟ್ರಿಕ್ ತಂತ್ರಜ್ಞಾನವಾದ ಡಿಜಿ ಯಾತ್ರಾ ಯೋಜನೆ ನಾಗರಿಕ ವಿಮಾನ ಯಾನ ಸಚಿವಾಲಯದ ಉಪಕ್ರಮವಾಗಿತ್ತು. ಹಲವು ತಪಾಸಣಾ ಕೇಂದ್ರಗಳ ಬಳಿ ಟಿಕೆಟ್ ಹಾಗೂ ಗುರುತು ಚೀಟಿಗಳನ್ನು ತಪಾಸಣೆಗೊಳಪಡಿಸುವ ಪ್ರಕ್ರಿಯೆಯನ್ನು ತೆಗೆದು ಹಾಕುವುದು ಈ ಯೋಜನೆಯ ಉದ್ದೇಶವಾಗಿತ್ತು.
ಆದರೆ, ಮುಖ ಗುರುತು ಸೆರೆ ಹಿಡಿಯುವ ತಂತ್ರಜ್ಞಾನ ಬಳಸಿ ಮಾಡುವ ಸಂಗ್ರಹ, ಹಂಚಿಕೆ ಹಾಗೂ ಪ್ರಯಾಣಿಕರ ಖಾಸಗಿತನ ಭದ್ರತೆ, ವಿಶೇಷವಾಗಿ ದತ್ತಾಂಶ ರಕ್ಷಣಾ ಯುಗದ ಗೈರಿನ ಕುರಿತು ಹೋರಾಟಗಾರರು ಹಾಗೂ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಡಿಸೆಂಬರ್, 2022ರಲ್ಲಿ ದಿಲ್ಲಿ, ಬೆಂಗಳೂರು ಹಾಗೂ ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗಿರುವ ಮುಖ ಗುರುತು ಸೆರೆ ಹಿಡಿಯುವ ಡಿಜಿ ಯಾತ್ರಾ ಯೋಜನೆಯನ್ನು ಶೀಘ್ರದಲ್ಲೇ ಕೋಲ್ಕತ್ತಾ, ಪುಣೆ, ವಿಜಯವಾಡ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಈ ತಿಂಗಳು ವಿಸ್ತರಿಸಲಾಗುವುದು ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ.