ಸಾಲಗಾರರ ಕಾಟ: ವಿಮೆಗಾಗಿ ತನ್ನ ಕುಟುಂಬ ಮೃತಪಟ್ಟಿದೆ ಎಂದು ದಾಖಲೆ ಸೃಷ್ಟಿಸಿದ ವ್ಯಕ್ತಿ!

Update: 2023-03-15 13:34 GMT

ರಾಯ್ಪುರ: ಸಾಲದ ಒತ್ತಡ ಹಾಗೂ ಸಾಲಗಾರರ ಕಾಟವನ್ನು ತಾಳಲಾರದೆ ತನ್ನ ಕುಟುಂಬವು ಕಾರಿನ ಅಪಘಾತದಲ್ಲಿ ಮೃತಪಟ್ಟಿದೆ ಎಂದು ವಿಮಾ ಹಣ ಪಡೆಯಲು ಸುಟ್ಟು ಕರಕಾಲದ ಕಾರನ್ನು ಬಿಟ್ಟು, ವ್ಯಕ್ತಿಯೊಬ್ಬ ಮಾರ್ಚ್ 1ರಿಂದ ಕಾಣೆಯಾಗಿದ್ದ ಘಟನೆ ಘತ್ತೀಸ್‌ಗಢ ರಾಜ್ಯದ ಕಂಕೇರ್ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ನಡೆದಿದೆ ಎಂದು timesofindia.com ವರದಿ ಮಾಡಿದೆ.

ಹೀಗೆ ಮಾಡುವ ಮೂಲಕ ವಿಮಾ ಕಂಪನಿಗಳಿಂದ ರೂ. 70 ಲಕ್ಷವನ್ನು ಪಡೆದು, ಆ ಪೈಕಿ ರೂ. 35 ಲಕ್ಷದ ಸಾಲವನ್ನು ತೀರಿಸುವ ಉದ್ದೇಶ ಆತನದಾಗಿತ್ತು ಎಂದು ಹೇಳಲಾಗಿದೆ.

ಆದರೆ, 13 ದಿನಗಳ ಈ ನಾಟಕವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಕುಟುಂಬವು ಇನ್ನೂ ಜೀವಂತವಾಗಿದೆ ಎಂಬ ಬಗ್ಗೆ ಖಾತ್ರಿಪಡಿಸಿಕೊಂಡಿದ್ದಾರೆ. ಇದರಿಂದ ವ್ಯಾಪಾರಿ ಸಮಿರಣ್ ಸಿಕಂದರ್ (29) ಮತ್ತೆ ಮನೆಗೆ ಮರಳಿದ್ದಾನೆ. 

ಸಮಿರಣ್, ಪತ್ನಿ ಜಯಾ ಹಾಗೂ ಇಬ್ಬರು ಮಕ್ಕಳು ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿದ್ದರು ಮತ್ತು ಅವರ ದಹನಗೊಂಡ ಕಾರು ಚರಮದಲ್ಲಿನ ಕಾಡಿನ ಬಳಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಕುಟುಂಬದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾಗ, ಸಮಿರಣ್ ಅಲಹಾಬಾದ್, ಪಾಟ್ನಾ, ಗುವಹಾಟಿ, ರಾಂಚಿ ಹಾಗೂ ಸಂಬಾಲ್‌ಪುರಕ್ಕೆ ತನ್ನ ವಾಸ್ತವ್ಯವನ್ನು ಬದಲಿಸುತ್ತಿದ್ದ ಎಂಬ ಸಂಗತಿ ಬಯಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂಕೇರ್ ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಸಿನ್ಹಾ, ಮಾರ್ಚ್ 1ರಂದು ರಾಯ್ಪುರದಿಂದ ವಾಪಸು ಬರುವಾಗ ಸಮಿರಣ್, ಧಮ್ತಾರಿಯಲ್ಲಿ ತನ್ನ ಕುಟುಂಬವು ಉಳಿದುಕೊಂಡಿದ್ದ ಹೋಟೆಲ್‌ ಅನ್ನು ತೆರವುಗೊಳಿಸಿ, ತನ್ನ ಕಾರನ್ನು ಚರಮ ಕಡೆ ಚಲಾಯಿಸಿದ್ದ. ನಂತರ ರಸ್ತೆ ಬದಿಯ ಮರವೊಂದಕ್ಕೆ ಕಾರನ್ನು ಗುದ್ದಿ, ಜೊತೆಯಲ್ಲಿ ತಂದಿದ್ದ ಇಂಧನದ ಮೂಲಕ ಅದನ್ನು ಹೊತ್ತಿಸಿದ್ದ. 

ಇದಾದ ನಂತರ ಬಸ್ ಮೂಲಕ ಅವರ ಸಂಪೂರ್ಣ ಕುಟುಂಬವು ರಾಯ್ಪುರ ಸೇರಿದಂತೆ ಇತರೆ ನಗರಗಳಿಗೆ ಪ್ರಯಾಣಿಸಿ ಧಮ್ತಾರಿಗೇ ಮರಳಿದ್ದರು. ಅದಕ್ಕೂ ಮುನ್ನ ರಾಯ್ಪುರದಲ್ಲಿ ಕೊನೆಯ ಬಾರಿಗೆ ಫೋಟೊ ಸ್ಟುಡಿಯೊವೊಂದರಲ್ಲಿ ಆತ ಕಂಡು ಬಂದಿದ್ದ.

ಆತ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಿದ್ದರೂ, ತಾತ್ಕಾಲಿಕ ನಂಬರ್ ಹಾಗೂ ಮೊಬೈಲ್ ಸೆಟ್ ಒಂದನ್ನು ಅಲಹಾಬಾದ್‌ನಲ್ಲಿ ಖರೀದಿಸಿ, ಸುದ್ದಿ ವರದಿಗಳು ಹಾಗೂ ಪೊಲೀಸರ ತನಿಖೆಯ ಮೇಲೆ ಕಣ್ಣಿಟ್ಟಿದ್ದ ಎಂದು ತಿಳಿಸಿದ್ದಾರೆ.

Similar News