ರಾಜಕೀಯದ ನೆರಳಿನಲ್ಲಿ ಕ್ರಿಕೆಟ್

Update: 2023-03-15 19:30 GMT

ಎಲ್ಲಿ ನೋಡಿದರೂ ಅಥವಾ ಎಲ್ಲ ಕಡೆ ದ್ವೇಷವನ್ನು ಪೋಷಿಸಲಾಗುತ್ತಿದೆ. ಕರುಣೆಯ ಕಣ್ಣು ಅರಳುವ ಬದಲು ನಂಜು ಮತ್ತು ಉರಿ ಬದುಕಿನ ಎರಡು ಕಣ್ಣುಗಳಂತೆ ಕೆರಳಿವೆ. ನಮ್ಮನ್ನಾಳುವವರನ್ನು ಆಯ್ಕೆ ಮಾಡಿ ಕಳುಹಿಸುವವರು ನಾವು. ನಮಗಿಲ್ಲದ ಪ್ರೀತಿ ಅವರಿಗೆ ಹೇಗೆ ಬಂದೀತು? ಇಂದಿನ ಕ್ಷಣಿಕ ಲಾಲಸೆಗಾಗಿ ದ್ವೇಷವೇ ನಮಗೆ ನೆರವಾಗುತ್ತದೆಂದು ನಮ್ಮ ಸಮಾಜವು ನಂಬಿದಂತಿದೆ. ಚುನಾವಣೆ ಹತ್ತಿರ ಬಂದಂತೆ ದ್ವೇಷದ ಕಿಡಿಗಳು ಇನ್ನಷ್ಟು ಭಯಂಕರವಾಗಿ ಜ್ವಾಲೆಗಳನ್ನು ಹಬ್ಬಿಸುತ್ತವೆ. ಚೆಂಡನ್ನು ಬೌಂಡರಿ ರೇಖೆಯಿಂದ ಹೊರಗಟ್ಟಿದರೆ ಅದಕ್ಕೆ ಬೌಂಡರಿ, ಸಿಕ್ಸರ್ ಎಂದು ಹೇಳುತ್ತಾರೆ. ಆದರೆ ಆಟವನ್ನೇ ಮೈದಾನದಿಂದ ಹೊರತಂದು ಹೊಸ ತುಂಡರಸರನ್ನು, ಗೂಂಡಾಪಡೆಗಳನ್ನು ರಚಿಸಿ ಅವೇ ತಮ್ಮ ತಂಡಗಳೆಂದು ಹೇಳುವವರಿಗೆ ಏನನ್ನಬೇಕು?



ಮೊನ್ನೆ ಮೊನ್ನೆ ನಡೆದ ಭಾರತ ಆಸ್ಟ್ರೇಲಿಯ ನಡುವಣ 4ನೇ ಕ್ರಿಕೆಟ್ ಟೆಸ್ಟ್ ಪಂದ್ಯ ಹಲವು ಕಾರಣಗಳಿಗಾಗಿ ಭಿನ್ನವಾಗಿತ್ತು. ದಡ್ಡು ಪಿಚ್‌ನ್ನು ಉದ್ದೇಶಪೂರ್ವಕವಾಗಿ ತಯಾರಿಸಿದಂತಿತ್ತು. ಯಾವ ಕಾರಣಕ್ಕೂ ಅದರಲ್ಲಿ ತೀರ್ಮಾನ ಬರಬಾರದೆಂಬ ಸುಪ್ತ ಕಾರ್ಯಸೂಚಿಯಿದ್ದಂತಿತ್ತು. (ಅದಕ್ಕೂ ಮೊದಲಿನ ಪಂದ್ಯ ಇಂದೋರಿನಲ್ಲಿ ನಡೆದಿದ್ದು ಭಾರತ ತಾನು ಸಿದ್ಧಗೊಳಿಸಿದ ಸ್ಪಿನ್ ಪಿಚ್‌ನ ಖೆಡ್ಡಾದಲ್ಲಿ ತಾನೇ ಬಿದ್ದದ್ದು ಪ್ರತ್ಯೇಕ ಕಥೆ.) ಆದರೆ ಇದಕ್ಕಿಂತ ಹೆಚ್ಚಿನ ವಿಚಾರ ಕ್ರೀಡೆಗೆ ಸಂಬಂಧಿಸಿದ ರಾಜಕೀಯದ್ದು. ಸರ್ದಾರ್ ವಲ್ಲಭಭಾಯಿ ಪಟೇಲ್ ಈ ದೇಶ ಕಂಡ ದಕ್ಷ ಗೃಹಮಂತ್ರಿಗಳು. ಕಾಂಗ್ರೆಸಿನ ಮುಂದಾಳುಗಳಲ್ಲೊಬ್ಬರು. ನಿಷ್ಠುರ ನ್ಯಾಯಪ್ರವೃತ್ತಿಗೆ ಎರಡು ಉದಾಹರಣೆಗಳು ಸಾಕು: ಮೊದಲನೆಯದು ಸೋಮನಾಥಪುರದ ದೇವಾಲಯದ ಜೀರ್ಣೋದ್ಧಾರ. ಎರಡನೆಯದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕೋಮುವಾದಿಯೆಂಬ ಕಾರಣಕ್ಕೆ ನಿಷೇಧಿಸಿದ್ದು. ಈಗ ಗುಜರಾತಿನ ಕ್ರಿಕೆಟ್ ಮೈದಾನಕ್ಕೆ ಅವರದೇ ಹೆಸರಿತ್ತು. ಅವರ ಅಗಾಧ ಪ್ರತಿಮೆಯನ್ನು ರಚಿಸಿ ಅವರನ್ನು ನೆಹರೂವಿಗಿಂತ ಶ್ರೇಷ್ಠರೆಂದು ಬಿಂಬಿಸಲು ಬೇಕಾದ ಎಲ್ಲ ಕೃತ್ರಿಮಗಳನ್ನು ಮಾಡಿದ ಹಿಂದುತ್ವ ಸಮೂಹ ಮತ್ತು ಮೋದಿ ಸರಕಾರ (ಇವುಗಳ ನಡುವೆ ಸಂಘಪರಿವಾರ ಮತ್ತು ಬಿಜೆಪಿ ಎಂಬುದು ಈಗ ಅಸ್ತಿತ್ವದಲ್ಲೇ ಇಲ್ಲವೆನ್ನುವಷ್ಟು ಕ್ಷೀಣವಾಗಿದೆ!) ಅವರ ಹೆಸರನ್ನು ತೆಗೆದು ಮೋದಿಯವರ ಹೆಸರನ್ನಿಡುವ ಲಜ್ಜಾಗೇಡಿ ಕೆಲಸವನ್ನು ಮಾಡಿತು. ಇದನ್ನು ಮೋದಿಯವರೇ ಗೌರವಯುತವಾಗಿ ನಿರಾಕರಿಸಬೇಕಾಗಿತ್ತು. ಆದರೆ ಅವರಿಂದ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಸರ್ದಾರರ ಬೆಂಬಲಿಗರಿಂದಾಗಲೀ, ಪ್ರತಿಪಕ್ಷಗಳಿಂದಾಗಲೀ ಕೊನೆಗೆ ನೆಟ್ಟಿಗರಿಂದಾಗಲೀ ಸರಿಪಡಿಸಲು ಯಶಸ್ವಿಯಾಗಲಿಲ್ಲ.

ಗುಜರಾತಿನ ಈ ಕ್ರೀಡಾಂಗಣವು ಭಾರತದ ರಾಜಕೀಯ ರಾಜಧಾನಿಯಾಗುತ್ತಿದೆ. ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್, ಜಪಾನಿನ ಪ್ರಧಾನಿ, ಹೀಗೆ ವಿದೇಶಿ ಗಣ್ಯರನ್ನು ಗುಜರಾತಿಗೆ ಬರಮಾಡುವುದು ಈಗ ಯಾಂತ್ರಿಕವಾಗಿದೆ. ಇದೇ ಕ್ರೀಡಾಂಗಣದಲ್ಲಿ ನಡೆದ ಮೊನ್ನೆಯ ಟೆಸ್ಟ್ ಪಂದ್ಯದ ಅವಧಿಯಲ್ಲಿ ಸಾಂದರ್ಭಿಕವಾಗಿ ಆಸ್ಟ್ರೇಲಿಯದ ಪ್ರಧಾನಿ ಭಾರತದಲ್ಲಿದ್ದರು. ಅವರು ಕ್ರಿಕೆಟ್ ಪಂದ್ಯವನ್ನು ನೋಡಲೆಂದು ಬಂದಿರಲಾರರು. ಆದರೆ ಅವರ ಭೇಟಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ನಮ್ಮ ಪ್ರಧಾನಿಯವರು ಅವರನ್ನು ಈ ಪಂದ್ಯಕ್ಕೆ ಆಹ್ವಾನಿಸಿದರು. ಅಲ್ಲಿ ಇವರಿಬ್ಬರ ರಥಯಾತ್ರೆ ನಡೆಯಿತು. ಸಾರ್ವಜನಿಕರ, ಕ್ರಿಕೆಟ್ ಆಸಕ್ತ-ಅಭಿಮಾನಿಗಳ ಪ್ರವೇಶವನ್ನು ನಿಷೇಧಿಸಲಾಯಿತು. ಮೋದಿ ಪರವಾಗಿ ಉಘೇ ಹೇಳಲು ಅವರ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಅವಕಾಶ ಮಾಡಿಕೊಡಲಾಯಿತು. ಮೋದಿ ಈ ಪಂದ್ಯವನ್ನು ತಮ್ಮ ಲಜ್ಜಾಹೀನ ಶ್ಲಾಘನೆ, ಪ್ರಚಾರ ಮತ್ತು ಆತ್ಮಪ್ರತ್ಯಯಕ್ಕೆ ಬಳಸಿಕೊಂಡರು. ಮೋದಿಯವರಿಗೆ ಅವರದ್ದೇ ಚಿತ್ರವನ್ನು ಉಡುಗೊರೆ ನೀಡಿದವರು ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಲ್ಲ; ಕೇಂದ್ರ ಗೃಹ ಮಂತ್ರಿಯವರ ಮಗ, ಸದ್ಯ ಬಿಸಿಸಿಐಯ ಕಾರ್ಯದರ್ಶಿ ಜಯ್ ಶಾ. ರಾಜಕೀಯಕ್ಕೆ ಬಲಿಯಾಗಿ ಕ್ರಿಕೆಟ್ ಕೆಟ್ಟಿತು. (ಈ ಬಗ್ಗೆ ರಾಮಚಂದ್ರ ಗುಹಾ ಇನ್ನಷ್ಟು ವಿವರಗಳನ್ನು ತಮ್ಮದೊಂದು ಅಂಕಣದಲ್ಲಿ ಬರೆದಿದ್ದು ಅದು ಇದೇ ಪತ್ರಿಕೆಯಲ್ಲೂ ಪ್ರಕಟವಾಗಿದೆ. ಅದನ್ನು ಓದಿಕೊಳ್ಳಬಹುದು. ಆದ್ದರಿಂದ ಇಷ್ಟಕ್ಕೆ ಈ ವಿಚಾರವನ್ನು ಮುಗಿಸಿದ್ದೇನೆ.)

ನಮ್ಮ ಕ್ರಿಕೆಟ್ ಆಟಗಾರರು ಈ ಬಗ್ಗೆ ಚಕಾರವೆತ್ತಿಲ್ಲ. ಅವರು ದೇವಲೋಕದ ಅಪ್ಸರೆಯರಂತೆ ತಮ್ಮ ಪಾಡಿಗೆ ತಾವಿದ್ದು ಯಾರೇ ದೇವೇಂದ್ರ ಪಟ್ಟಕ್ಕೆ ಬಂದರೂ ಅವರನ್ನು ರಮಿಸುವುದು ತಮ್ಮ ಕರ್ತವ್ಯವೆಂದು ತಿಳಿದಂತಿದೆ. ಕ್ರಿಕೆಟ್‌ನಲ್ಲಿ ಸಂಪಾದಿಸುವ ಹಣದ ಹೊರೆ ಇವೆಲ್ಲವನ್ನೂ ತಣಿಸಿದೆ. ಇದಕ್ಕಿಂತಲೂ ಘೋರ ರಾಜಕೀಯವನ್ನು ಈ ದೇಶ ಕಾಣುತ್ತಿದೆ. ಇದೇ ಪಂದ್ಯದಲ್ಲಿ ಮುಹಮ್ಮದ್ ಶಮಿ ಎಂಬ ಭಾರತೀಯ ಆಟಗಾರನನ್ನು ಹಿಂದುತ್ವದ ಬೆಂಬಲಿಗರು ಟೀಕಿಸಿ ಗದ್ದಲವನ್ನುಟುಮಾಡಿದರು. ಇಂತಹ ಹತ್ತು ಹಲವು ಘಟನೆಗಳು ಆಗಾಗ ಮರುಕಳಿಸುತ್ತಿದೆ. ಆದರೆ ಸರಕಾರ ಏನೂ ಕ್ರಮಕೈಗೊಂಡಂತಿಲ್ಲ. ಇನ್ನೂ ನಾಚಿಕೆಗೇಡಿನ ಘಟನೆಯೊಂದು ಸದ್ದಿಲ್ಲದೆ ನಡೆಯಿತು.

ಆಸ್ಟ್ರೇಲಿಯ ತಂಡದ ಪ್ರಮುಖ ಆಟಗಾರ (ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಆಡುವ) ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಅವರಿಗೆ ತಂಡದ ಇತರ ಆಟಗಾರರೊಡನೆ ಭಾರತಕ್ಕೆ ಬರಲು ವೀಸಾವನ್ನು ನಿರಾಕರಿಸಲಾಯಿತು. ಸಾರ್ವಜನಿಕವಾಗಿ ಹೇಳದಿದ್ದರೂ ಇದಕ್ಕೆ ಎರಡು ಕಾರಣಗಳಿದ್ದವು: ಒಂದು, ಆತ ಆಸ್ಟ್ರೇಲಿಯದ ತಂಡವನ್ನು ಸಾಕಷ್ಟು ಶಕ್ತಿಯುತಗೊಳಿಸಿದವನು; ಎರಡು, ಆತ ಪಾಕಿಸ್ತಾನ ಮೂಲದ ಮುಸ್ಲಿಮ್. ಈ ಉಸ್ಮಾನ್ ಖ್ವಾಜಾ 1990ರಲ್ಲಿ ಆಸ್ಟ್ರೇಲಿಯಕ್ಕೆ ವಲಸೆಹೋದ ಕುಟುಂಬದವನು. ಆಗಿನ್ನೂ ಆತನಿಗೆ 4 ವರ್ಷ. ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾದ ಮೊದಲ ಮುಸ್ಲಿಮ್. ಕೇವಲ 60 ಟೆಸ್ಟ್ ಪಂದ್ಯಗಳನ್ನಾಡಿ 47.81 ಸರಾಸರಿಯಲ್ಲಿ 14 ಶತಕ ಮತ್ತು 21 ಅರ್ಧ ಶತಕಗಳೊಂದಿಗೆ 4,495 ರನ್ನುಗಳನ್ನು ಪೇರಿಸಿದವನು. ಆಗಾಗ ಗಾಯ ಮತ್ತಿತರ ಸಮಸ್ಯೆಗಳಿಂದಾಗಿ ಅವಕಾಶ ವಂಚಿತನಾದರೂ ಈಗ ಆಸ್ಟ್ರೇಲಿಯ ತಂಡದ ಅನಿವಾರ್ಯ ಅಂಗ. ತನ್ನ ಕರ್ಮಭೂಮಿ ಆಸ್ಟ್ರೇಲಿಯ ಎಂದು ದುಡಿದವನು. ಮಾತೃಭೂಮಿ ಪಾಕಿಸ್ತಾನದ ವಿರುದ್ಧವೇ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದವನು. ಆತನಿಗೆ ಈ ವೀಸಾ ನಿರಾಕರಣೆಗೆ ಪ್ರಧಾನಿ ನೇರ ಕಾರಣವೆನ್ನುವಂತಿಲ್ಲ. ಅವರ ಭಕ್ತರ, ಬೆಂಬಲಿಗರ, ಅನುಯಾಯಿಗಳ ಅತೀವ ಅಭಿಮಾನದ ಹೇಳಿಕೆಗಳ ಹೊರತಾಗಿಯೂ ಅವರು ಈ ಎಲ್ಲ ಚಿಕ್ಕಪುಟ್ಟ ಕ್ಷುಲ್ಲಕ ಮತಾಂಧ ಚಟುವಟಿಕೆಗಳನ್ನು ಮಾಡಿಸುತ್ತಾರೆಂದು ಹೇಳಲಾಗದು. ಇದರಲ್ಲಿ ಹೀಗೆ ಮಾಡಿದರೆ ಅವರಿಗೆ ಸಂತೋಷವಾಗುತ್ತದೆಂಬ ನಂಬಿಕೆಯಲ್ಲಿ ಮತ್ತು ಅವರನ್ನು ಮೆಚ್ಚಿಸಲೋಸುಗ ನಮ್ಮ ಅಧಿಕಾರಶಾಹಿ ಹಾಗೂ ಕೆಲವು ಸಂವಿಧಾನೇತರ ರಾಜಕೀಯ ಶಕ್ತಿಗಳು ಕೆಲಸಮಾಡಿರಬಹುದೆನ್ನಿಸುತ್ತದೆ.

ಇದಕ್ಕೆ ಪ್ರಾಯಃ ವಿದೇಶಾಂಗ ಸಚಿವರ ಕೈವಾಡವೂ ಇರಬಹುದು. ಏಕೆಂದರೆ ಅವರು ಈಗ ಪ್ರಧಾನಿಯವರನ್ನು ಮೆಚ್ಚಿಸಲೋಸುಗ ಎಷ್ಟು ದೂರ ಬೇಕಾದರೂ ಹೋಗುವ ಇರಾದೆಯನ್ನು ಪ್ರಕಟಿಸಿದ್ದಾರೆ. ವಿದೇಶಗಳಿಂದ ಮೆಚ್ಚುಗೆ ಲಭಿಸಿದರೆ ಅದು ನಮ್ಮ ಯೋಗ್ಯತೆಯ ಮಾಪನವಾಗುತ್ತದೆ; ಆದರೆ ಅದೇ ವಿದೇಶಗಳು ನಮ್ಮನ್ನು ಟೀಕಿಸಿದರೆ ಅದು ದುಷ್ಟ ಸಂಚಾಗುತ್ತದೆ. ಆಸ್ಕರ್ ಪ್ರಶಸ್ತಿ ಯಾವನೇ ಭಾರತೀಯನಿಗೆ ಸಿಕ್ಕಿದರೂ ಅದು ಪ್ರಧಾನಿಯದ್ದೇ ಸಾಧನೆಯಾಗುತ್ತದೆ, ಅವರ ಕಿರೀಟಕ್ಕೊಂದು ಗರಿಯಾಗುತ್ತದೆ ಎಂಬಲ್ಲಿಯವರೆಗೂ ಈ ಶ್ಲಾಘನೆಯು ಸಾಗುತ್ತದೆ. ಟೀಕಿಸಿದರೆ 'ನ್ಯೂಯಾರ್ಕ್ ಟೈಮ್ಸ್' ಆಗಲೀ, ಬಿಬಿಸಿಯಾಗಲೀ ಭಾರತದ ಕುರಿತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವಹೇಳನದ ಸುಳ್ಳುಗಳನ್ನು ಹೇಳುತ್ತಿವೆಯೆಂದು ನಮ್ಮ ವಿದೇಶಾಂಗ ಸಚಿವರು ಆಗಾಗ ಹೇಳುತ್ತಿರುತ್ತಾರೆ. ಇರಲಿ; ಈ ಉಸ್ಮಾನ್ ಖ್ವಾಜಾನಿಗೆ ವೀಸಾ ನಿರಾಕರಿಸಿದ್ದರ ವಿರುದ್ಧ ಆಸ್ಟ್ರೇಲಿಯ ಪ್ರತಿಭಟಿಸಿದ ಮೇಲೆ ಆತನಿಗೂ ವೀಸಾ ನೀಡಿ ಭಾರತ ಪ್ರವೇಶಿಸಲು ಅವಕಾಶವಾಯಿತು. ಈ ಸರಣಿಯಲ್ಲಿ ಆತ ಗಳಿಸಿದ ಅಂಕಗಳು 1, 5, 81, 6, 60, 0, 180 ಆತನ ತಂಡದ ಪೈಕಿ ಅತ್ಯಧಿಕ. ಇವುಗಳ ನಡುವೆ ಭಾರತ ಮತ್ತು ಆಸ್ಟ್ರೇಲಿಯದ ಪ್ರಧಾನಿಗಳ ರಥಯಾತ್ರೆ, ಆಸ್ಟ್ರೇಲಿಯದ ಸಚಿವರೊಬ್ಬರು ಅವರಿಗೆ ಪಾಠ ಹೇಳಿದ ಭಾರತೀಯ ಮೂಲದ ಶಿಕ್ಷಕಿಯನ್ನು ಸ್ಮರಿಸಿದ್ದನ್ನು ನಮ್ಮ ಪ್ರಧಾನಿ ಹಂಚಿಕೊಂಡದ್ದು, ಒಂದು ವ್ಯಂಗ್ಯ. ರಾಜಕೀಯಕ್ಕೆ ಕ್ರೀಡೆಯನ್ನು ಬಳಸಬಾರದೆಂದು ಮತ್ತು ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸಬಾರದೆಂದು ನಾವು ಅರ್ಥಮಾಡಿಕೊಳ್ಳಲು ಇನ್ನೂ ಬಹುಕಾಲ ಬೇಕು.

ಕ್ರೀಡೆ ಮತ್ತು ರಾಜಕೀಯ (ಮತ್ತು ಯುದ್ಧ?) ಇವು ಇಂದಿನ ಪ್ರಮುಖ ಜೀವನ ನೋಟಗಳು. (ಯುದ್ಧವನ್ನು ಹಾಗೆನ್ನಲಾಗದು; ಏಕೆಂದರೆ ಅದೊಂದು ಚ್ಯುತಿ; ಅಪವಾದ. ಆದರೂ ಅದೀಗ ನಿಯಮವಾಗುವತ್ತ ಹೊರಳುತ್ತಿದೆ; ಅದರ ಭಯ ಜೀವನ ಪರ್ಯಂತ ಎಂಬಂತಿದೆ.) ಭಾರತದಲ್ಲಂತೂ ಕೋಮುವಾದ ಕ್ರಿಕೆಟ್ ಮತ್ತಿತರ ಕ್ರೀಡೆಗಳಿಗೆ ಪ್ರವೇಶಿಸಲು ದಿನಗಣನೆಯಾಗುತ್ತಿದೆ. ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದೆಂದು ಹೇಳುವವರಿಗೆ ಕ್ರಿಕೆಟ್ ಒಂದು ಆಟವಲ್ಲ; ಅದೊಂದು ಯುದ್ಧದ ಭಾಗ. ಇದಕ್ಕೆ ಸರಿಯಾಗಿ ನಮ್ಮ ಮಾಧ್ಯಮಗಳು ಅದನ್ನು ರಕ್ತರಂಜಿತವಾಗಿ ವರ್ಣಿಸುತ್ತಿವೆ. ಸಭ್ಯರ ಆಟವಾಗಿದ್ದ ಕ್ರಿಕೆಟ್ ಈಗ ಹಣದಾಹ ತುಂಬಿ ಮಟ್ಕಾದಂತಾಗಿದೆ. ಜೂಜುಕೋರರ ಸ್ವರ್ಗವಾಗಿದೆ. ಆಟಗಾರರು ತಮ್ಮ ಕಿಸೆ ತುಂಬಿಸಿಕೊಳ್ಳುತ್ತ ದಾಟಿಹೋಗುತ್ತಿದ್ದಾರೆ. ಇನ್ನೊಂದಷ್ಟು ವರ್ಷಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ಶಸ್ತ್ರಾಸ್ತ್ರಗಳು ಬ್ಯಾಟ್, ವಿಕೆಟ್, ಬಾಲುಗಳ ಸ್ಥಾನವನ್ನು ಆಕ್ರಮಿಸಿಕೊಳ್ಳದಿದ್ದರೆ ಅದು ಕ್ರಿಕೆಟಿಗಾಗಿ ಮತ್ತು ಅದರ ಗೌರವವನ್ನು ಕಾಪಾಡುವುದಕ್ಕಾಗಿ ಬದುಕಿದವರ ಅದೃಷ್ಟ.

ನಮ್ಮ ದೇಶವು ಕಳೆದ ಏಳೂವರೆ ದಶಕಗಳಿಂದ ಮೇಲೇಳುತ್ತಿದೆ. ಈ ವಿಕಾಸದಲ್ಲಿ ಎಲ್ಲರೂ ದುಡಿದಿದ್ದಾರೆ. ಆದರೂ ಈಗ ಕೆಲವರು ತಾವೇ ಇವೆಲ್ಲವನ್ನೂ ಮಾಡಿದ್ದು ಎಂಬ ಹಾಗೆ ಮಾತನಾಡುತ್ತಿದ್ದಾರೆ. ಅದನ್ನು ತನ್ನ ತಂದೆಯ ಹೆಗಲ ಮೇಲೆ ಕುಳಿತ ಮಗು ತಾನು ಆತನಿಗಿಂತ ದೊಡ್ಡವನು ಎಂದು ಬೀಗಿದಂತೆ ಎಂಬ ಹೋಲಿಕೆಯೊಂದಿಗೆ ಅವರ ಮೂರ್ಖತನ ಮತ್ತು ಪರಮ ಅಜ್ಞಾನವೆಂದು ಹೇಳಿ ಅಲಕ್ಷಿಸಬಹುದು. ಆದರೆ ಅಂತಹ ಮಾತುಗಳ ಅಡ್ಡ ಪರಿಣಾಮಗಳನ್ನು ಊಹಿಸುವಾಗ ಗಾಬರಿಯಾಗುತ್ತದೆ. ಕ್ರಿಕೆಟ್ ಅಂತಲ್ಲ, ರಾಜಕೀಯ ಅಥವಾ ಅದನ್ನು ಆಧರಿಸಿದ ದ್ವೇಷವು ಎಲ್ಲ ಕ್ಷೇತ್ರಗಳನ್ನು ನುಂಗುತ್ತಿದೆ. ಹಿಂದೆ ವರ್ಣದ್ವೇಷವು ಕ್ರಿಕೆಟ್ ಆಟವನ್ನು ನುಂಗಿದ್ದು ಆ ಕಾರಣದಿಂದಲೇ ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್ ವಲಯದಿಂದ ಬಹಿಷ್ಕೃತವಾದದ್ದು ಮತ್ತು ಈ ಬಹಿಷ್ಕಾರದಿಂದಾಗಿ ಗ್ರಹಾಂ ಪೊಲ್ಲಾಕ್, ಪೀಟರ್ ಪೊಲ್ಲಾಕ್ ಸಹೋದರರೂ ಸೇರಿದಂತೆ ಬೇರೀ ರಿಚರ್ಡ್ಸ್‌ರಂತಹ ಮಹಾನ್ ಆಟಗಾರರು ವಿಶ್ವ ಕ್ರಿಕೆಟಿನಿಂದ ಹೊರಗುಳಿಯುವಂತಾಯಿತು. ಮನಸ್ಸು ಮಾಡಿದ್ದರೆ ವಸಾಹತುಶಾಹಿ ಆಡಳಿತ ವರ್ಣದ್ವೇಷದ ರಾಜಕೀಯವನ್ನು ಚಿಟಿಕೆ ಹೊಡೆಯುವುದರಲ್ಲಿ ಅಳಿಸಬಹುದಿತ್ತು. ಆದರೆ ವ್ಯಕ್ತಿ ಪ್ರತಿಷ್ಠೆ, ಜಾತಿ-ಮತ-ಧರ್ಮ-ಜನಾಂಗ ಪ್ರತಿಷ್ಠೆಯಿಂದಾಗಿ ವರ್ಣದ್ವೇಷವು ಮತ್ತಷ್ಟು ಕಾಲ ಮುನ್ನಡೆಯಿತು. ಕೊನೆಗೂ ಅಳಿಯಿತು. ಈಗೀಗ ಮನುಷ್ಯ ಪ್ರವೃತ್ತಿಯೇ ಬದಲಾಗಿದೆ ಅಥವಾ ಹಿಂದೆಯೂ ಹೀಗೇ ಇತ್ತೇನೋ? ಎಲ್ಲಿ ನೋಡಿದರೂ ಅಥವಾ ಎಲ್ಲ ಕಡೆ ದ್ವೇಷವನ್ನು ಪೋಷಿಸಲಾಗುತ್ತಿದೆ. ಕರುಣೆಯ ಕಣ್ಣು ಅರಳುವ ಬದಲು ನಂಜು ಮತ್ತು ಉರಿ ಬದುಕಿನ ಎರಡು ಕಣ್ಣುಗಳಂತೆ ಕೆರಳಿವೆ. ನಮ್ಮನ್ನಾಳುವವರನ್ನು ಆಯ್ಕೆ ಮಾಡಿ ಕಳುಹಿಸುವವರು ನಾವು. ನಮಗಿಲ್ಲದ ಪ್ರೀತಿ ಅವರಿಗೆ ಹೇಗೆ ಬಂದೀತು? ಇಂದಿನ ಕ್ಷಣಿಕ ಲಾಲಸೆಗಾಗಿ ದ್ವೇಷವೇ ನಮಗೆ ನೆರವಾಗುತ್ತದೆಂದು ನಮ್ಮ ಸಮಾಜವು ನಂಬಿದಂತಿದೆ. ಚುನಾವಣೆ ಹತ್ತಿರ ಬಂದಂತೆ ದ್ವೇಷದ ಕಿಡಿಗಳು ಇನ್ನಷ್ಟು ಭಯಂಕರವಾಗಿ ಜ್ವಾಲೆಗಳನ್ನು ಹಬ್ಬಿಸುತ್ತವೆ. ಚೆಂಡನ್ನು ಬೌಂಡರಿ ರೇಖೆಯಿಂದ ಹೊರಗಟ್ಟಿದರೆ ಅದಕ್ಕೆ ಬೌಂಡರಿ, ಸಿಕ್ಸರ್ ಎಂದು ಹೇಳುತ್ತಾರೆ. ಆದರೆ ಆಟವನ್ನೇ ಮೈದಾನದಿಂದ ಹೊರತಂದು ಹೊಸ ತುಂಡರಸರನ್ನು, ಗೂಂಡಾಪಡೆಗಳನ್ನು ರಚಿಸಿ ಅವೇ ತಮ್ಮ ತಂಡಗಳೆಂದು ಹೇಳುವವರಿಗೆ ಏನನ್ನಬೇಕು?

ಇಬ್ಬರು ಪರಮಾಪ್ತ ಸ್ನೇಹಿತರ ನಡುವೆ ದ್ವೇಷ ಹುಟ್ಟಿಸುವ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಮುದುಕಿಯೊಬ್ಬಳು ಒಬ್ಬನ ಕಿವಿಯಲ್ಲಿ ಗುಟ್ಟಾಗಿ ''ಒಂದು ಭತ್ತಕ್ಕೆ ಒಂದು ಅಕ್ಕಿ'' ಎಂದಳಂತೆ. ಆತ ''ಅಷ್ಟೇನಾ'' ಎಂದ. ಆತನ ಗೆಳೆಯ ಆಕೆ ಏನು ಹೇಳಿದಳು ಎಂದು ಕೇಳಿದಾಗ ಮುದುಕಿ ಹೇಳಿದ್ದನ್ನು ಪುನರುಚ್ಚರಿಸಿದ. ಆದರೆ ಆ ಗೆಳೆಯ ಅದನ್ನು ನಂಬಲಿಲ್ಲ. ಅಷ್ಟೇ ಆದರೆ ಗುಟ್ಟಾಗಿ ಹೇಳುವ ಅಗತ್ಯವೇನಿತ್ತು ಎಂದು ಹೇಳಿ ಜಗಳ ಕಾದು ಅವರಿಬ್ಬರೂ ವೈರಿಗಳಾದರಂತೆ. ಸ್ನೇಹಿತರ ನಡುವೆ ಒಡಕು ತಂದ ಈ ಜಾನಪದ ಕಥೆ ಈಗ ಎಲ್ಲರ ಕಥೆ.

ಸತ್ತ ಮೇಲೆ ಉಳಿಯಲು ಎಲ್ಲರೂ ಪ್ರಯತ್ನ ಪಡುವ ಕಾಲವೊಂದಿತ್ತೆಂದು ಹೇಳುತ್ತಾರೆ. ಆದರೆ ಈಗ ಎಲ್ಲರೂ ಬದುಕಿರುವಾಗಲೇ ಸಾಯಲು ಪ್ರಯತ್ನಪಡುತ್ತಾರೆ. ಅದಕ್ಕೆ ದ್ವೇಷದ ಬೆಂಕಿ ಬಲು ಒಳ್ಳೆಯ ವೇಗೋತ್ಕರ್ಷಕ. ಒಮ್ಮೆ ಕಡ್ಡಿಗೀರಿದರೆ ಸಾಕು ಅದು ಆರಲು ಬಿಡದೆ ಹಬ್ಬಿಸಲು ಸಾಕಷ್ಟು ಸಮಾಜ ಕಂಟಕರಿರುತ್ತಾರೆ. ಅಳಿವುದು ಕೀರ್ತಿ; ಉಳಿವುದು ಕಾಯ. ಕಾಯವಳಿದರೆ? ಕಾಯವಳಿದರೆ ಅಲ್ಲಿ ಇನ್ನೇನೂ ಉಳಿಯುವುದಿಲ್ಲ. ಆರ್ಜಿಸಿದ ಕೀರ್ತಿಯೇನೂ ಇಲ್ಲದಿರುವಾಗ ಉಳಿಯುವುದು ದ್ವೇಷದ ಹೊಗೆ ಮಾತ್ರ. ಈ ಹೊಗೆಯ ಮಂದ ಬೆಳಕಿನಲ್ಲಿ ಆಟವಾಡಲು ಕಷ್ಟವೆಂದು ಹೇಳುವ ಆಟಗಾರರೂ ಇಲ್ಲ; ತೀರ್ಪುಗಾರರೂ ಇಲ್ಲ

Similar News