ಸ್ವಾವಲಂಬನೆಗಾಗಿ ಸದ್ದಿಲ್ಲದೆ ಸಾಗಿದೆ ರಾಗಿ ಕ್ರಾಂತಿ

Update: 2023-03-16 07:04 GMT

ರಾಗಿಬೀಜಗಳನ್ನೂ ಮಕ್ಕಳಂತೆ ನೋಡಿಕೊಳ್ಳುವ ಈ ಮಹಿಳೆಯರು, ಪ್ರತೀ ಬೀಜವೂ ಬಹಳ ಮುಖ್ಯ ಎಂದು ಭಾವಿಸುತ್ತಾರೆ. ಅದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಬೀಜ ರಕ್ಷಣೆ ಕೆಲಸದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವವರು ಅಲ್ಲಿದ್ದಾರೆ. ಪ್ರತಿ ಋತುವಿನಲ್ಲಿ 25 ತಳಿಗಳನ್ನು ಬೆಳೆಯುವವರಿದ್ದಾರೆ. ರಾಗಿಯನ್ನು ಉಳಿಸಲು ಮತ್ತು ಬೆಳೆಯಲು ಸಾವಿರಾರು ಮಹಿಳೆಯರಿಗೆ ತರಬೇತಿ ನೀಡಿದವರಿದ್ದಾರೆ.

ಅದೊಂದು ಮೌನ ಕ್ರಾಂತಿ. ತೆಲಂಗಾಣದ ಝಹೀರಾಬಾದ್ ಪಟ್ಟಣದ ಮತ್ತು ಸುತ್ತಮುತ್ತಲಿನ 70 ಹಳ್ಳಿಗಳಲ್ಲಿನ ಮಹಿಳೆಯರು ಅದರ ನಾಯಕಿಯರು. ಕೆಂಪು ಕಲ್ಲಿನ ಒಣ ಭೂಮಿಯಲ್ಲಿ ಅನೇಕ ವಿಧದ ರಾಗಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಬೆಳೆಯುತ್ತಿರುವ ಈ ಮಹಿಳೆಯರ ಕಥೆ ಅನುಕರಣೀಯ.

ರಾಗಿ ಸೇವನೆಯನ್ನು ಹೆಚ್ಚಿಸಲು ಮತ್ತು ಅದರ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸಲು ವಿಶ್ವಸಂಸ್ಥೆಯು 2023ನೇ ವರ್ಷವನ್ನು ‘ಅಂತರ್‌ರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಿದೆ. ಇಂಥ ಹೊತ್ತಿನಲ್ಲಿ, 75 ವೈವಿಧ್ಯದ ರಾಗಿಬೀಜಗಳ ಬಗ್ಗೆ ಬೆರಗು ಮೂಡಿಸುವಷ್ಟು ಅರಿವು ಹೊಂದಿರುವ ಈ ಸಾವಯವ ರಾಗಿ ಕ್ರಾಂತಿಯ ಅಮ್ಮಂದಿರು ಕೃಷಿಪ್ರಪಂಚದ ಹಿರಿಮೆಗೂ ಉದಾಹರಣೆಯಾಗುತ್ತಾರೆ.

ರಾಗಿಬೀಜಗಳನ್ನೂ ಮಕ್ಕಳಂತೆ ನೋಡಿಕೊಳ್ಳುವ ಅವರು, ಪ್ರತೀ ಬೀಜವೂ ಬಹಳ ಮುಖ್ಯ ಎಂದು ಭಾವಿಸುತ್ತಾರೆ. ಅದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಬೀಜ ರಕ್ಷಣೆ ಕೆಲಸದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವವರು ಅಲ್ಲಿದ್ದಾರೆ. ಪ್ರತೀ ಋತುವಿನಲ್ಲಿ 25 ತಳಿಗಳನ್ನು ಬೆಳೆಯುವವರಿದ್ದಾರೆ. ರಾಗಿಯನ್ನು ಉಳಿಸಲು ಮತ್ತು ಬೆಳೆಯಲು ಸಾವಿರಾರು ಮಹಿಳೆಯರಿಗೆ ತರಬೇತಿ ನೀಡಿದವರಿದ್ದಾರೆ.

60 ವರ್ಷದ ಲಕ್ಷ್ಮೀ ಅಂಥವರಲ್ಲಿ ಒಬ್ಬರು. ಕೆನಡಾ, ಲಂಡನ್, ಜರ್ಮನಿ, ಸಿಂಗಾಪುರ್, ಸೆನೆಗಲ್, ಸಿಂಗಾಪುರ್, ಮಾಲಿ ಸೇರಿದಂತೆ ಸುಮಾರು 20 ದೇಶಗಳಿಗೆ ಅವರು ಹೋಗಿಬಂದಿದ್ದಾರೆ. ಅಲ್ಲೆಲ್ಲ ರಾಗಿಯ ಬಗ್ಗೆ ಮಾತನಾಡಿದ್ದಾರೆ. 2020ರಲ್ಲಿ ರಾಗಿ ಬೀಜಗಳ ನಿರ್ವಹಣೆಗೆ ನೀಡಿದ ಕೊಡುಗೆಗಾಗಿ ಮಹಿಳಾ ಸಬಲೀಕರಣದ ಅಡಿಯಲ್ಲಿ ರಾಜ್ಯಪಾಲರಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಹೊರಗಿನಿಂದ ಮಣ್ಣು ಮೆತ್ತಿರುವ ಬುಟ್ಟಿಗಳಲ್ಲಿ ಬೀಜಗಳನ್ನು ಜೋಪಾನ ಮಾಡಲಾಗುತ್ತದೆ. ಬೂದಿ, ಬೇವುಗಳೊಂದಿಗೆ ಬೀಜಗಳನ್ನು ಸೇರಿಸಿ ಬುಟ್ಟಿಯಲ್ಲಿಟ್ಟು ನಂತರ ಹಸುವಿನ ಸೆಗಣಿಯಿಂದ ಬುಟ್ಟಿಗಳ ಮೇಲ್ಭಾಗವನ್ನು ಮುಚ್ಚಲಾಗುತ್ತದೆ. ಇದು ಬೀಜಗಳನ್ನು ಉಳಿಸುವ ಸಾಂಪ್ರದಾಯಿಕ ಮಾರ್ಗವಾಗಿದೆ ಎನ್ನುತ್ತಾರೆ ಲಕ್ಷ್ಮೀ.

ಭತ್ತ ಅಥವಾ ಗೋಧಿಯಂಥ ವಾಣಿಜ್ಯ ಬೆಳೆಗಳ ಬದಲು ರಾಗಿ ಮತ್ತಿತರ ಧಾನ್ಯಗಳನ್ನು ಬೆಳೆಯುವ ಮೊಗುಲಮ್ಮ ಹೇಳುವುದು ಹೀಗೆ: ‘‘ನನ್ನ ಎರಡು ಎಕರೆ ಹೊಲದಲ್ಲಿ ರಾಗಿ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಇತ್ಯಾದಿ 80ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತೇನೆ. ಭತ್ತ ಮತ್ತು ಗೋಧಿ ಬೆಳೆದರೆ ಹೆಚ್ಚಿನ ಹಣ ಬಂದರೂ, ಅದೇ ಹಣದಿಂದ ರಾಗಿ ಮತ್ತಿತರ ಧಾನ್ಯಗಳನ್ನು ಖರೀದಿಸಬೇಕಾಗುತ್ತದೆ. ಅದರ ಬದಲು ನಾವೇ ಏಕೆ ಬೆಳೆಯಬಾರದು? ನಾನಂತೂ ಇದಾವುದಕ್ಕೂ ಮಾರುಕಟ್ಟೆಯನ್ನು ಅವಲಂಬಿಸಿಲ್ಲ.’’ ಇದು ನಿಜ ಸ್ವಾವಲಂಬನೆಯ ಕಥೆಯೂ ಹೌದು.

ಈ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದರಿಂದ ಹಣ ಬರುವುದಿಲ್ಲ ಎಂತಲೂ ಅಲ್ಲ. ರಾಗಿ ಬೆಳೆದಾಗ ಧಾನ್ಯ ಮಾತ್ರವಲ್ಲದೆ ಮೇವನ್ನೂ ಮಾರಾಟ ಮಾಡಬಹುದು. ಈ ಬೆಳೆಗಳು ಯಾವುದೇ ಬಗೆಯ ಹವಾಮಾನದಲ್ಲೂ ಬೆಳೆಯುವಂಥವು. ಅವುಗಳಲ್ಲಿ ಆರು ಅಥವಾ ಹತ್ತು ಬಗೆಗಳು ಹಾಳಾದರೂ ಉಳಿದ 10-12 ಬಗೆಗಳು ನಮ್ಮ ಪಾಲಿಗೆ ಇರುತ್ತವೆ ಎಂದು ವಿವರಿಸುತ್ತಾರೆ ಅವರು.

ಮೊಗುಲಮ್ಮ ಕೂಡ 2018ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪಡೆದ ಪುರಸ್ಕಾರವೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೀಜ ಸಂರಕ್ಷಣೆಯಲ್ಲಿ ತೊಡಗಿರುವ ಇತರ ಮಹಿಳೆಯರ ಸಾಧನೆಯೂ ಕಡಿಮೆಯಿಲ್ಲ. ಅವರು 150ಕ್ಕೂ ಹೆಚ್ಚು ಪ್ರಭೇದಗಳನ್ನು ಸಾವಯವ ವಿಧಾನದಲ್ಲಿ ಬೆಳೆಯುತ್ತಾರೆ. ಆಗಾಗ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ಕಡಿಮೆ ನೀರಿನಿಂದ ಗಟ್ಟಿಯಾದ ಕೆಂಪು ಮಣ್ಣಿನಲ್ಲಿ ಫಸಲು ಪಡೆಯುತ್ತಾರೆ.

ಮೆಟಲಕುಂಟಾ ಗ್ರಾಮದ ನರಸಮ್ಮ ಆರು ಎಕರೆ ಕೆಂಪು ಮಣ್ಣಿನ ಜಮೀನು ಹೊಂದಿದ್ದಾರೆ. ಪೌಷ್ಟಿಕ ರಾಗಿಸೇವನೆ ಬಗ್ಗೆ ಅವರು ಹೇಳುವ ಮಾತು ಗಮನೀಯ: ‘‘ನಮ್ಮಲ್ಲಿ ಪ್ರತಿಯೊಂದು ಅಗತ್ಯಕ್ಕೂ ರಾಗಿ ಬೀಜಗಳಿವೆ. ಬಾಣಂತಿ ತಿನ್ನಬೇಕಾದ ರಾಗಿಯಿಂದ ಹಿಡಿದು, ಅನಾರೋಗ್ಯದ ಸಮಯದಲ್ಲಿ ತಿನ್ನುವ ಬೇರೆ ಬೇರೆ ಥರದ ರಾಗಿಗಳಿವೆ. ವಿವಿಧ ಕಾಯಿಲೆಗಳಿಗೆ ವಿವಿಧ ತಳಿಗಳ ಹಿಟ್ಟು ಬಳಸುತ್ತೇವೆ. ಮೊದಲು ಮನೆಯ ಬಳಕೆಗಾಗಿ ಬೆಳೆಯುತ್ತೇವೆ. ಹೆಚ್ಚಿನದನ್ನು ಮಾತ್ರ ಮಾರಾಟ ಮಾಡುತ್ತೇವೆ. ಮೊಳಕೆಯೊಡೆದ ರಾಗಿಯಿಂದ ಮಾಡಿದ ಹಿಟ್ಟಿನಲ್ಲಿ ಶಕ್ತಿ ಹೆಚ್ಚು.’’

ಚಂದ್ರಮ್ಮ ಎಂಬ ಇನ್ನೊಬ್ಬರು ಒಂದೂವರೆ ಎಕರೆ ಕೆಂಪುಮಣ್ಣಿನ ಜಮೀನು ಹೊಂದಿದ್ದು, ಈ ವರ್ಷ ಕಪ್ಪುಮಣ್ಣಿನ ಮೂರು ಎಕರೆ ಗುತ್ತಿಗೆ ಪಡೆದಿದ್ದಾರೆ. ಕಳೆದ 30 ವರ್ಷಗಳಿಂದ ಅವರು ಬೆಳಗ್ಗೆ 4 ಗಂಟೆಗೇ ಏಳುತ್ತಾರೆ. 5 ಗಂಟೆಗೆ ಹೊಲ ತಲುಪುವ ಮೊದಲು ಮನೆಕೆಲಸಗಳನ್ನು ಮುಗಿಸಬೇಕಿರುತ್ತದೆ. ಪ್ರತೀ ವರ್ಷ ಅವರು ರಬಿ ಋತುವಿನಲ್ಲಿ 28 ತಳಿಗಳನ್ನೂ ಖಾರಿಫ್ ಋತುವಿನಲ್ಲಿ 30 ತಳಿಗಳನ್ನೂ ಬೆಳೆಯುತ್ತಾರೆ.

ಅಂತರ ಬೆಳೆಗಳಾಗಿ ಅವರು ಜೋಳ, ಕುಸುಬೆ, ದ್ವಿದಳ ಧಾನ್ಯಗಳು, ಚನ್ನ ಮತ್ತು ಇತರ ಸ್ಥಳೀಯ ತರಕಾರಿಗಳನ್ನು ಬೆಳೆಯುತ್ತಾರೆ. ಒಟ್ಟಾರೆ ಏಳು ಮುಖ್ಯ ಬೆಳೆಗಳ ಜೊತೆಗೆ 16 ಉಪ ಪ್ರಭೇದಗಳನ್ನು ಬೆಳೆಯುತ್ತಾರೆ. ಸುಗ್ಗಿಯ ಕಾಲದಲ್ಲಿ ಒಂದೆಡೆ ಜೋಳ ಕಟಾವು ನಡೆಯುತ್ತಿರುವಾಗಲೇ ಮತ್ತೊಂದೆಡೆ ಕಬ್ಬು ಕತ್ತರಿಸಿ ಒಯ್ಯುವ ಕೆಲಸವೂ ನಡೆದಿರುತ್ತದೆ.

ಚಂದ್ರಮ್ಮ ಕೃಷಿಯ ವಿಚಾರದಲ್ಲಿ ಅನೇಕ ವಿಚಾರಗಳನ್ನು ಬಲ್ಲವರು. ತಮ್ಮ ಇಡೀ ಜೀವನವನ್ನು ಕೃಷಿಯಲ್ಲಿಯೇ ತೊಡಗಿಸಿಕೊಂಡಿರುವವರು. ನೂರಾರು ತಳಿ ಪ್ರಭೇದಗಳನ್ನು ಉಳಿಸಿದವರು ಮತ್ತು ಅನೇಕ ತಲೆಮಾರುಗಳ ಮಹಿಳೆಯರಿಗೆ ಮಾದರಿ. ಮದುವೆಯಾದ ಮೇಲೆ ಈ ಬೀಜರಕ್ಷಕರ ಗುಂಪು ಸೇರಿಕೊಂಡರು. ಅದಕ್ಕೆ ಕಾರಣರಾದವರು ಅವರ ಅತ್ತೆ. ಅಲ್ಲಿಂದ ಶುರುವಾದ ಮೇಲೆ ಇಲ್ಲಿಯವರೆಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ರಾಸಾಯನಿಕ ಬಳಕೆಯಿಂದ ಕೃಷಿ ಉತ್ಪನ್ನ ಹೆಚ್ಚುವುದಲ್ಲವೆ ಎಂದು ಕೇಳಿದರೆ, ‘‘ಇಲ್ಲ’’ ಎಂಬ ಖಡಕ್ ಉತ್ತರ ಅವರದು. ‘‘ನಾನು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಮಾತ್ರ ನಂಬುತ್ತೇನೆ. ಕಬ್ಬು ಕೂಡ ಸ್ಥಳೀಯ ತಳಿ. ಕಪ್ಪುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವುದರಿಂದ ನಾನು ಅದನ್ನು ನೆಡುತ್ತೇನೆ. ಕೆಂಪು ಮಣ್ಣಿನಲ್ಲಿ ರಾಗಿ ಮತ್ತು ಕಾಳುಗಳನ್ನು ಬೆಳೆಯುತ್ತೇನೆ. ಮಣ್ಣು ಮತ್ತು ಹವಾಮಾನಕ್ಕೆ ಅನುಗುಣವಾಗಿ ಬೆಳೆ ತೆಗೆಯುವುದು ಮುಖ್ಯ.’’ ನಿಸರ್ಗ ದೊಂದಿಗಿನ ಈ ಸಮರಸವೇ ಕೃಷಿಯಲ್ಲಿನ ಯಶಸ್ಸಿನ ದೊಡ್ಡ ಗುಟ್ಟು ಎಂಬುದು ಅವರ ಮಾತುಗಳಲ್ಲಿದೆ.

ಆಕೆಯ ಜಮೀನಿನಿಂದ 500 ಮೀಟರ್ ದೂರದಲ್ಲೇ ರೈತರು ಇತ್ತೀಚೆಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಹೊಸ ಕಾಲನಿ ಬರುತ್ತಿದೆ. ಆದರೆ ಚಂದ್ರಮ್ಮ ಮಾತ್ರ ಜಮೀನು ಮಾರಲು ತಯಾರಿಲ್ಲ. ‘‘ನಾನು ನನ್ನ ಭೂಮಿಯನ್ನು ಮಾರಿದರೆ, ಎಲ್ಲಿಗೆ ಹೋಗಲಿ? ಇದು ನನ್ನ ಜೀವನ ಮತ್ತು ಘನತೆ. ಈ ಭೂಮಿಯಲ್ಲಿ ದುಡಿದು ನಾನು ನನ್ನ ಮಕ್ಕಳನ್ನು ಬೆಳೆಸಿದ್ದೇನೆ, ನಾನು ಅದನ್ನು ಎಂದಿಗೂ ಮಾರಾಟ ಮಾಡಲಾರೆ. ರಾಗಿ ಕಾಳು ಉಳಿಸುವುದು ನನ್ನ ಕರ್ತವ್ಯ’’ ಎಂಬ ಅವರ ಮಾತುಗಳಲ್ಲಿ ದೃಢತೆಯಿದೆ.

ಇಂಥ ಗಟ್ಟಿಗರ ಕಾರಣದಿಂದಾಗಿಯೇ ರಾಗಿ ಕ್ರಾಂತಿಯ ದಾರಿಯೂ ದೃಢವಾಗಿದೆ ಎಂಬುದು ನಿಜ. ಈ ದೇಶವನ್ನು ನಿಜವಾಗಿಯೂ ಉಳಿಸುವ, ಸದ್ದಿರದ ಹಾದಿ ಇದು.

( ಕೃಪೆ: thewire.in)

Similar News