ಅಗ್ರಿಗೋಲ್ಡ್ ವಂಚನೆ ವಿರುದ್ಧ ಗ್ರಾಹಕರಿಂದ ಪ್ರತಿಭಟನೆ: ಹಣ ಬಿಡುಗಡೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಉಡುಪಿ, ಮಾ.17: ಅಗ್ರಿಗೋಲ್ಡ್ ಕಂಪೆನಿಯು ಕರ್ನಾಟಕ ಜನತೆಗೆ ಎಸಗಿರುವ ಮಹಾವಂಚನೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಪ್ರಕರಣವನ್ನು ಕೂಡಲೇ ಇತ್ಯರ್ಥ ಮಾಡಿ ಗ್ರಾಹಕರ ಹಣವನ್ನು ಹಿಂತಿರುಗಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಪ್ರತಿನಿಧಿಗಳ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಪ್ರತಿಭಟನೆ ಹಾಗೂ ಜಾಥವನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಅಂಡಾಲು ರಮೇಶ್ ಬಾಬು ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಗ್ರಿಗೋಲ್ಡ್ ವಂಚನೆಗೆ ಸಂಬಂಧಿಸಿದ ಎಲ್ಲಾ ರಾಜ್ಯಗಳ ವಿಶೇಷ ನ್ಯಾಯಲಯಗಳಲ್ಲಿರುವ ದಾವೆಗಳು ಆಂಧ್ರಪ್ರದೇಶದ ಎಲ್ಲೂರು ಜಿಲ್ಲಾ ನ್ಯಾಯಲಯಕ್ಕೆ ವರ್ಗಾವಣೆಗೊಂಡಿದ್ದು ಕರ್ನಾಟಕ ಸರಕಾರವು ಎಲ್ಲೂರು ಜಿಲ್ಲಾ ನ್ಯಾಯಲಯಕ್ಕೆ ಕರ್ನಾಟಕದ ಗ್ರಾಹಕರ ಪರವಾಗಿ ಅಫಿಡೆವೆಟ್ ಸಲ್ಲಿಸಬೇಕಾಗಿದೆ. ಆದರೆ ಕರ್ನಾಟಕ ಸರಕಾರದ ಅಧಿಕಾರಿಗಳು ಆಮೆಗತಿಯಲ್ಲಿ ಕೆಲಸ ಮಾಡಿಕೊಂಡಿದ್ದು ರಾಜ್ಯದ ಗ್ರಾಹಕರ ನೋವುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ಸಿಐಡಿ ಇಲಾಖೆಯ ವರದಿ ಪ್ರಕಾರ ಅಗ್ರಿಗೋಲ್ಡ್ ಕಂಪೆನಿಯಲ್ಲಿ ಸುಮಾರು 8,14,178 ಗ್ರಾಹಕರು ಹಾಗೂ ಸುಮಾರು 2 ಲಕ್ಷ ಅಧಿಕ ಏಜೆಂಟರು ಇದ್ದಾರೆ. ನಮ್ಮ ರಾಜ್ಯದಲ್ಲಿ ಒಟ್ಟು 1,850 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಆಂಧ್ರ ಸರಕಾರವು ಆತ್ಮಹತ್ಯೆ ಮಾಡಿದ ಅಗ್ರಿಗೋಲ್ಡ್ ಏಜೆಂಟ್‌ಗಳ ಕುಟುಂಬಕ್ಕೆ ತಲಾ 5ಲಕ್ಷ ರೂ. ನೀಡಿದ್ದು, 1,300 ಕೋಟಿ ಬಿಡುಗಡೆ ಮಾಡಿ ಗ್ರಾಹಕರಿಗೆ ನೀಡಿದೆ. ಇದೇ ರೀತಿ ಕರ್ನಾಟಕ ಸರಕಾರವು ಕೂಡ ನೊಂದ ಗ್ರಾಹಕರಿಗೆ ಸ್ಪಂದಿಸಿ ಸಮಸ್ಯೆ ಇತ್ಯರ್ಥಕ್ಕಾಗಿ ಹಣ ಬಿಡುಗಡೆ ಮಾಡಬೇಕು ಎಂದರು.
ಆಂಧ್ರಪ್ರದೇಶ ಸರಕಾರ ಗ್ರಾಹಕರಿಗೆ ನೀಡಿರುವ 300 ಕೋಟಿಯನ್ನು 1ಲಕ್ಷ ಗ್ರಾಹಕರಿಗೆ ನೀಡಲಾಗಿದೆ. ಕರ್ನಾಟಕ ಸರಕಾರ ಕೂಡ ಇದೇ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ ನಮ್ಮ ವೇದಿಕೆಯಲ್ಲಿರುವ ಸರಿಸುಮಾರು 40 ಲಕ್ಷ ಗ್ರಾಹಕರು ಹಾಗೂ ಅವರ ಕುಟುಂಬದವರು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸ ಬೇಕು. ಅಗ್ರಿಗೋಲ್ಡ್ ಕಂಪೆನಿಯ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲು ಆಂದ್ರಪ್ರದೇಶದ ನ್ಯಾಯಲಯವು ಕೈಗೊಂಡಿರುವ ಕ್ರಮಗಳಂತೆ ಕರ್ನಾಟಕ ದಲ್ಲಿನ ಆಸ್ತಿಗಳನ್ನು ಸಹ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಅಗ್ರಿಗೋಲ್ಡ್ ಕಂಪೆನಿಯ ಆಸ್ತಿಗಳಾದ ಸ್ಥಿರ ಮತ್ತು ಬೇನಾಮಿ ವಿವರದ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
ಆಂಧ್ರಪ್ರದೇಶದಂತೆ ಕರ್ನಾಟಕದಲ್ಲಿಯೂ ಸಹ ವಂಚಿತ ಗ್ರಾಹಕರ ಕಿರುಕುಳ ಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸುಮಾರು 45ಕ್ಕೂ ಹೆಚ್ಚು ಅಧಿಕ ಮಂದಿ ಅಗ್ರಿಗೋಲ್ಡ್ ಏಜೆಂಟರ ಕುಟುಂಬ ಸದಸ್ಯರಿಗೆ ಕನಿಷ್ಟ 5 ಲಕ್ಷ ರೂಗಳ ಪರಿಹಾರ ಧನವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಗುರುಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ರಾಜನ್, ಉಡುಪಿ ಜಿಲ್ಲಾಧ್ಯಕ್ಷ ಕೆ.ನಾರಾಯಣ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಪಾವರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ಮಂದಿ ಪ್ರತಿಭಟನಾಕಾರರು ಜಾಥ ನಡೆಸಿದರು.