×
Ad

ರಾಜ್ಯದಲ್ಲಿ ಬೀಡಿ ಕಾರ್ಮಿಕರ ಬದುಕು ಅತಂತ್ರ: ಬಾಲಕೃಷ್ಣ ಶೆಟ್ಟಿ

ಉಡುಪಿ ಬೀಡಿ ಕಾರ್ಮಿಕರ ಯೂನಿಯನ್ ಮಹಾಸಭೆ ಉದ್ಘಾಟನೆ

Update: 2023-03-18 13:01 IST

ಉಡುಪಿ, ಮಾ.18: ರಾಜ್ಯದಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರ ಬದುಕು ಇಂದು ಅತಂತ್ರ ಸ್ಥಿತಿಯಲ್ಲಿದೆ. ಈ ಬಗ್ಗೆ ಶಾಸಕರು ಯಾವುದೇ ಚಕಾರ ಎತ್ತುತ್ತಿಲ್ಲ. ಆದುದರಿಂದ ಸರಕಾರದ ಕೆಲವೊಂದು ನೀತಿಗಳ ವಿರುದ್ಧ ಬೀಡಿ ಕಾರ್ಮಿಕರು ಸಂಘಟಿತರಾಗಿ ಚಳವಳಿ ಕಟ್ಟಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಉಡುಪಿ ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ಬೀಡಿ ಆ್ಯಂಡ್ ಟೊಬೆಕೋ ಲೇಬರ್ ಯೂನಿಯನ್ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ 13 ರಾಜ್ಯಗಳಲ್ಲಿ ಒಟ್ಟು ಮೂರು ಕೋಟಿ ಬೀಡಿ ಕಾರ್ಮಿಕರಿದ್ದು, ಕೇಂದ್ರ ಸರಕಾರ ಬೀಡಿ ಕೈಗಾರಿಕೆಗಳನ್ನು ನಿಧಾನವಾಗಿ ನಾಶದತ್ತ ಕೊಂಡೊಯ್ಯುತ್ತಿದೆ. ಇದರ ಪರಿಣಾಮ ಬೀಡಿ ಕಾರ್ಮಿಕರು ಕೆಲಸ ಇಲ್ಲದೆ ನಿರುದ್ಯೋಗಿ ಗಳಾಗಿದ್ದಾರೆ. ಬೀಡಿ ಕೈಗಾರಿಕೆಯನ್ನು ನಿಷೇಧ ಮಾಡಿದರೆ ಇದರಲ್ಲಿ ತೊಡಗಿಕೊಂಡಿರುವ ಮೂರು ಕೋಟಿ ಮಂದಿಗೆ ಬದಲಿ ವ್ಯವಸ್ಥೆ ಸರಕಾರ ಮಾಡ ಬೇಕಾಗಿದೆ. ಬೀಡಿ ಕಾರ್ಮಿಕರು ಹೋರಾಟ ಮಾಡಿ ಪಡೆದ ಸವಲತ್ತುಗಳನ್ನು ಕೇಂದ್ರ ಸರಕಾರ ಒಂದೊಂದನ್ನೇ ಕಸಿದುಕೊಳ್ಳುತ್ತಿದೆ ಎಂದು ಅವರು ದೂರಿದರು.

ಈ ಮೊದಲು ಬೀಡಿ ಮಾರಾಟಕ್ಕೆ ವಿಧಿಸಲಾದ ತೆರಿಗೆ ಹಣವು ಕಾರ್ಮಿಕ ಕಲ್ಯಾಣ ಮಂಡಳಿಗೆ ಸಿಗುತ್ತಿತ್ತು. ಆದರೆ ಇಂದು ಜಿಎಸ್‌ಟಿ ಹೆಸರಿನಲ್ಲಿ ಬರುವ ಹಣವು ಕಲ್ಯಾಣ ಮಂಡಳಿ ಬದಲು ಸರಕಾರದ ಬೊಕ್ಕಸೆಗೆ ಸೇರುತ್ತಿದೆ. ಇದರಿಂದ ಕಲ್ಯಾಣ ಮಂಡಳಿಯಲ್ಲಿ ಹಣ ಇಲ್ಲದೆ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗದಂತಾಗಿದೆ ಎಂದು ಅವರು ಆರೋಪಿಸಿದರು.

ಬೀಡಿ ಕಾರ್ಮಿಕರ ಕೂಲಿಯು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಇದರಿಂದ ಬೀಡಿ ಮಾಲಕರು ಕಡಿಮೆ ಕೂಲಿ ಇರುವ ರಾಜ್ಯಗಳಿಂದ ಬೀಡಿಗಳನ್ನು ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದುದರಿಂದ ಸರಕಾರ ದೇಶದ ಎಲ್ಲ ರಾಜ್ಯಗಳಲ್ಲಿ ಒಂದೇ ರೀತಿಯ ಕೂಲಿ ಕೊಡಲು 1000 ಬೀಡಿಗಳಿಗೆ 395ರೂ. ರಾಷ್ಟ್ರೀಯ ಕನಿಷ್ಠ ಕೂಲಿಯನ್ನು ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿದರು. ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್ ಎಸ್., ಉಡುಪಿ ಬೀಡಿ ಆ್ಯಂಡ್ ಟೊಬೆಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್., ಕೋಶಾ ಧಿಕಾರಿ ಜ್ಯೋತಿ, ಮಾಜಿ ಅಧ್ಯಕ್ಷೆ ಸುಂದರಿ ಉಪಸ್ಥಿತರಿದ್ದರು.


ಮಾ.28ರಂದು ಉಡುಪಿಯಲ್ಲಿ ಧರಣಿ

ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿ ನೀಡಬೇಕು ಮತ್ತು ಪರ್ಯಾಯ ಉದ್ಯೋಗಕ್ಕೆ ಯೋಜನೆ ರೂಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಫೆ.27ರಿಂದ ಮಾ.27ರವರೆಗೆ ಬೇಡಿಕೆ ಮಾಸಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಾ.28ರಂದು ಬೆಳಗ್ಗೆ 1 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ತಿಳಿಸಿದರು.

Similar News