ಸಂಸದೀಯ ಸಮಿತಿ ಸಭೆಯಲ್ಲಿ ಲಂಡನ್ ಹೇಳಿಕೆಗೆ ರಾಹುಲ್ ಗಾಂಧಿ ಸ್ಪಷ್ಟನೆ

Update: 2023-03-19 06:10 GMT

ಹೊಸದಿಲ್ಲಿ: ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಪ್ರಶ್ನಿಸುವ ಮೂಲಕ ವಿದೇಶದಲ್ಲಿ ದೇಶವನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿ ಆರೋಪದ ನಡುವೆಯೇ ಶನಿವಾರ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿರುವ  ತಮ್ಮ ಭಾಷಣದ ಕುರಿತು ಸುದೀರ್ಘವಾಗಿ ಮಾತನಾಡಿದರು. ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು.

ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಎತ್ತಿದ್ದೇನೆ.  ಅದಕ್ಕಾಗಿ "ರಾಷ್ಟ್ರವಿರೋಧಿ" ಎಂಬ ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ ಎಂದು ವಯನಾಡ್ ಸಂಸದ ಹೇಳಿದರು ಎಂದು  ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧ್ಯಕ್ಷತೆಯಲ್ಲಿ ನಡೆದ  ಸಂಸದೀಯ ಸಲಹಾ ಸಮಿತಿಯಲ್ಲಿ, “ ನಾನು ಯಾವುದೇ ದೇಶವನ್ನು  ಮಧ್ಯಪ್ರವೇಶಿಸುವಂತೆ ಆಗ್ರಹಿಸಿಲ್ಲ’’ಎಂದು ರಾಹುಲ್  ಗಾಂಧಿ ಸ್ಪಷ್ಟಪಡಿಸಿದರು.

ಇದು ಆಂತರಿಕ ವಿಷಯ ಎಂದು ನನ್ನ ನಂಬಿಕೆ ಹಾಗೂ ಅದನ್ನು ಪರಿಹರಿಸಲಾಗುತ್ತದೆ ಎಂದು ಮಾಜಿ ಕಾಂಗ್ರೆಸ್  ಅಧ್ಯಕ್ಷರು ಹಾಜರಿದ್ದ ನಾಯಕರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ . ಜೈಶಂಕರ್ ಕೂಡ ಭಾಗವಹಿಸಿದ್ದ ಸಭೆಯಲ್ಲಿ ಭಾರತದ ಜಿ 20 ಅಧ್ಯಕ್ಷ ಸ್ಥಾನದ ಕುರಿತು ಚರ್ಚಿಸುವ ಗುರಿಯನ್ನು ಹೊಂದಿತ್ತು. ಸಭೆಯ ಆರಂಭದಲ್ಲಿ ಜೈಶಂಕರ್ ಅವರು ಸಮಿತಿಯ ಸದಸ್ಯರಿಗೆ ಜಿ 20 ಅಧ್ಯಕ್ಷತೆಯ ಕುರಿತು ವಿವರಣೆ ನೀಡಿದರು.

ಆರಂಭಿಕ ಸುತ್ತಿನಲ್ಲಿ ಮಾತನಾಡದ ರಾಹುಲ್ ಗಾಂಧಿ, ವಿದೇಶಿ ನೆಲದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೂಲಕ ರಾಜಕೀಯ ನಾಯಕರೊಬ್ಬರು ಲಾಭ ಗಳಿಸಲು ಪ್ರಯತ್ನಿಸುತ್ತಿರುವ ವಿಷಯವನ್ನು ಸಂಸದರೊಬ್ಬರು ಪ್ರಸ್ತಾಪಿಸಿದ ನಂತರ ರಾಹುಲ್  ಪ್ರತಿಕ್ರಿಯಿಸಿದರು.

Similar News