ಬಿಹಾರ ಸಿಎಂ ನಿತೀಶ್ ಕುಮಾರ್‌ರಿಂದ ಬಿಜೆಪಿಗೆ ನೆರವು: ಅಸದುದ್ದೀನ್ ಉವೈಸಿ ಆರೋಪ

Update: 2023-03-19 07:01 GMT

ಪಾಟ್ನಾ: ಬಿಜೆಪಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೆರವು ನೀಡುತ್ತಿದ್ದಾರೆಂದು ಆರೋಪಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ತಮ್ಮ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲಾಗುತ್ತಿದೆ ಎಂದು ಆರ್‌ಜೆಡಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ ಎಂದು Hindustantimes.com ವರದಿ ಮಾಡಿದೆ.

ಸೀಮಾಂಚಲ ಪ್ರದೇಶಕ್ಕೆ ಒಂದು ದಿನದ ಭೇಟಿ ನೀಡಿರುವ ಹೈದರಾಬಾದ್ ಸಂಸದರೂ ಆದ ಅಸದುದ್ದೀನ್ ಉವೈಸಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, "ಬಿಜೆಪಿಯನ್ನು ಬಲಿಷ್ಠಗೊಳಿಸಿದ್ದಕ್ಕೆ ಇತಿಹಾಸವು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ" ಎಂದು ನಿತೀಶ್ ಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

2002ರ ಗುಜರಾತ್ ಗಲಭೆಯನ್ನು ಉಲ್ಲೇಖಿಸಿದ ಅವರು, "ಗುಜರಾತ್ ಹತ್ತಿ ಉರಿಯುವಾಗ, ನಿತೀಶ್ ಕುಮಾರ್ ರೈಲ್ವೆ ಮಂತ್ರಿಯಾಗಿದ್ದರು" ಎಂದು ಹೇಳಿದ್ದಾರೆ.

ಎಐಎಂಐಎಂ ಪಕ್ಷ ಕೇವಲ ಮುಸ್ಲಿಮರಿಗೆ ಸೇರಿದ್ದು ಎಂಬ ನಿತೀಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಉವೈಸಿ, "ಮೊದಲು ನಿಮ್ಮೊಳಗೆ ನೋಡಿಕೊಳ್ಳಿ. ನೀವು ಕುರ್ಮಿ ಹಾಗೂ ಕೊಯಿರಿ ಜಾತಿಯ ನೆರಳಿನಿಂದ ಇನ್ನೂ ಹೊರ ಬಂದಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

ಆರ್‌ಜೆಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಜನರಿಂದ ಚುನಾಯಿತರಾದವರನ್ನು ಆರ್‌ಜೆಡಿ ಹಣದ ಬಲದಿಂದ ಸೋಲಿಸುತ್ತಿದೆ" ಎಂದು ಕಿಡಿ ಕಾರಿದ್ದಾರೆ.

2020ರ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಸೀಮಾಂಚಲ ಪ್ರದೇಶದಲ್ಲಿ ಎಐಎಂಐಎಂನ ಐದು ಶಾಸಕರು ಚುನಾಯಿತರಾಗಿದ್ದರು. ಕಳೆದ ವರ್ಷ ಈ ಪೈಕಿ ನಾಲ್ಕು ಶಾಸಕರು ಆರ್‌ಜೆಡಿಗೆ ಪಕ್ಷಾಂತರವಾಗಿದ್ದರು.

Similar News