2023ನೇ ಸಾಲಿನ ವಿಶ್ವದ ಅತ್ಯದ್ಭುತ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 2 ಸ್ಥಳಗಳು ಯಾವುವು ಗೊತ್ತೆ?

Update: 2023-03-19 13:47 GMT

ಹೊಸದಿಲ್ಲಿ: 'TIME'  ನಿಯತಕಾಲಿಕವು ತನ್ನ ವಾರ್ಷಿಕ ವಿಶ್ವದ ಅತ್ಯದ್ಭುತ ಸ್ಥಳಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ. ಪಟ್ಟಿಯಲ್ಲಿ 50 ಸ್ಥಳಗಳು ಸ್ಥಾನ ಪಡೆದಿದ್ದು, ಭಾರತದ ಮಯೂರ್‌ಭಂಜ್ ಹಾಗೂ ಲಡಾಖ್ ಸ್ಥಾನ ಗಿಟ್ಟಿಸಿವೆ ಎಂದು ndtv.com  ವರದಿ ಮಾಡಿದೆ.

ಮಯೂರ್‌ಭಂಜ್ (Mayurbhanj) ಹಾಗೂ ಲಡಾಖ್ (Ladakh) ಕ್ರಮವಾಗಿ ತಮ್ಮಲ್ಲಿರುವ ವಿರಳ ಹುಲಿಗಳು ಮತ್ತು ಪ್ರಾಚೀನ ದೇವಾಲಯಗಳು ಹಾಗೂ ಸಾಹಸ ಮತ್ತು ತಿನಿಸಿಗಾಗಿ ಆಯ್ಕೆಯಾಗಿವೆ. ತನ್ನ ಪ್ರತಿಷ್ಠಿತ ಪಟ್ಟಿಯಲ್ಲಿ ಈ ಸ್ಥಳಗಳು ಏಕೆ ಸ್ಥಾನ ಪಡೆದಿವೆ ಎಂಬ ಕಾರಣವನ್ನು ಎತ್ತಿ ತೋರಿಸಲು ಲಡಾಖ್ ಹಾಗೂ ಮಯೂರ್‌ಭಂಜ್ ಸ್ಥಳಗಳ ಸ್ಥಳ ವಿವರ ಪುಟಗಳನ್ನು ಟೈಮ್ ನಿಯತಕಾಲಿಕ ಸೃಷ್ಟಿಸಿದೆ.

ಉತ್ತರ ಭಾರತದ ದೂರ ಪ್ರದೇಶವಾದ ಲಡಾಖ್ ತನ್ನ ಕಡಿದಾದ ಕಣಿವೆಗಳು ಹಾಗೂ ಟಿಬೆಟಿಯನ್ ಬೌದ್ಧ ಸಂಸ್ಕೃತಿಯ ಸಾಕಷ್ಟು ವಿಸ್ಮಯವನ್ನು ಹೊಂದಿರುವ ಕಾರಣಕ್ಕೆ ಹಲವು ಬಾರಿ ಭೇಟಿ ನೀಡಬಹುದಾದ ಸ್ಥಳವಾಗಿದೆ. ಹಾಗೆಯೇ ಹಸಿರುಚ್ಛಾದಿತ ಪ್ರದೇಶ, ಸಂಪದ್ಭರಿತ ಸಂಸ್ಕೃತಿ ಪರಂಪರೆ ಹಾಗೂ ಪ್ರಾಚೀನ ದೇವಾಲಯಗಳ ಕಾರಣಕ್ಕೆ ಒಡಿಶಾದ ಮಯೂರ್‌ಭಂಜ್  ಭಾರತದ ಎರಡನೆ ಅತ್ಯದ್ಭುತ ಸ್ಥಳ ಎಂಬ ಹಿರಿಮೆಗೆ ಪಾತ್ರವಾಗಿದೆ. 

ಮಯೂರ್‌ಭಂಜ್ ನಲ್ಲಿ ಮಾತ್ರ ಅಳಿವಿನಂಚಿನಲ್ಲಿರುವ ಕಪ್ಪು ಬಣ್ಣದ ಹುಲಿಗಳು ಕಾಣಸಿಗುತ್ತವೆ. ಇದಲ್ಲದೆ ಪ್ರಖ್ಯಾತ ಸಿಮಿಲಿಪಲ್ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಈ ಜಿಲ್ಲೆಯಲ್ಲಿ ದೊರೆಯುತ್ತವೆ ಎಂದು ಟೈಮ್ ನಿಯತಕಾಲಿಕ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ 'TIME' ನಿಯತಕಾಲಿಕದ ಹಿರಿಯ ಸಂಪಾದಕ ಎಮ್ಮಾ ಬಾರ್ಕರ್ ಬೊನೊಮೊ, "ಆಯ್ಕೆ ಮಾಡಿರುವ ಪಟ್ಟಿಯು ಸದ್ಯ ಪ್ರವಾಸದಲ್ಲಿ ಒಂದೆರಡು ದೊಡ್ಡ ಪ್ರವೃತ್ತಿಯನ್ನು ಪ್ರತಿಬಿಂಬಿಸಿವೆ: ಸುಸ್ಥಿರತೆ ಹಾಗೂ ಪ್ರಮಾಣೀಕರಣ. ಈ ಪಟ್ಟಿಯಲ್ಲಿರುವ ಹಲವಾರು ಸ್ಥಳಗಳು ಪ್ರವಾಸಿಗರಿಗೆ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಭೇಟಿ ನೀಡಲು ಅವಕಾಶ ಒದಗಿಸುತ್ತವೆ. ಹಲವಾರು ಮಂದಿ ಪ್ರವಾಸಿಗರಿಗೆ ಪ್ರಾದೇಶಿಕ ಅನುಭವ ನೀಡುವ ಅಥವಾ ಸುರಕ್ಷಿತ ವಾಸ್ತವ್ಯ ಒದಗಿಸುವ ಮೂಲಕ ವೈಶಿಷ್ಟ್ಯಪೂರ್ಣ, ಸ್ಥಳೀಯ ಅನುಭವ ನೀಡಿದ್ದಾರೆ" ಎಂದು ಹೇಳಿದ್ದಾರೆ.

ವಿಶ್ವದ ಪ್ರಥಮ 20 ಅದ್ಭುತ ಸ್ಥಳಗಳ ಪೈಕಿ ಸ್ಥಾನ ಪಡೆದ ಸ್ಥಳಗಳು ಹೀಗಿವೆ:

1. ಟಾಂಪಾ, ಫ್ಲೋರಿಡಾ

2. ವಿಲ್ಲಾಮೆಟ್ ವ್ಯಾಲಿ, ಒರೆಗಾನ್‌

3. ರಿಯೊ ಗ್ರಾಂಡ್, ಪಿ.ಆರ್.

4. ಟುಕ್ಸನ್, ಅರಿಝೋನಾ

5. ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನ, ಕ್ಯಾಲಿಫೋರ್ನಿಯಾ

6. ಬೋಝ್‌ಮನ್, ಮೊಂಟಾನಾ

7. ವಾಷಿಂಗ್ಟನ್, ಡಿ.ಸಿ.

8. ವ್ಯಾಂಕೋವರ್

9. ಚರ್ಚಿಲ್, ಮ್ಯಾನಿಟೊಬಾ

10. ಡೈಜನ್, ಫ್ರಾನ್ಸ್

11. ಪ್ಯಾಂಟೆಲೆರಿಯಾ, ಇಟಲಿ

12. ನೇಪಲ್ಸ್, ಇಟಲಿ

13. ಅರ್ಹಸ್, ಡೆನ್ಮಾರ್ಕ್

14. ಸೇಂಟ್ ಮೊರಿಟ್ಝ್, ಸ್ವಿಜರ್ಲ್ಯಾಂಡ್

15. ಬಾರ್ಸಿಲೋನಾ

16. ಟಿಮಿಸೋರಾ, ರೊಮಾನಿಯ

17. ಸಿಲ್ಟ್, ಜರ್ಮನಿ

18. ಬೆರಾತ್, ಅಲ್ಬೇನಿಯ

19. ಬುಡಾಪೆಸ್ಟ್

20. ವಿಯೆನ್ನಾ

Similar News