ಮಾ.26: ಸಮತಾ ಸೈನಿಕ ದಳದಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನೆ ಎದುರು ಧರಣಿ

Update: 2023-03-20 16:03 GMT

ಉಡುಪಿ, ಮಾ.20: ತಾವು ನೀಡಿದ ಯಾವುದೇ ವಾಗ್ದಾನವನ್ನು ಈಡೇರಿಸಲು ಹಾಗೂ ಮಾಡಿದ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿರುವ ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವೈಫಲ್ಯತೆಯನ್ನು ಖಂಡಿತ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಮಾ.26ರಂದು ಕೋಟದ ಅವರ ಮನೆ ಮುಂದೆ ಬೃಹತ್ ಧರಣಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾಗಿ ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ‘ಅಂಬೇಡ್ಕರ್ ಆವಾಜ್’ ಮನೆ ನಿರ್ಮಾಣಕ್ಕೆ 7ಲಕ್ಷ ರೂ. ಸಹಾಯಧನ ನೀಡುವುದಾಗಿ ಘೋಷಿಸಿದ್ದು, ಇನ್ನೂ ಅದು ಕಾರ್ಯರೂಪಕ್ಕೆ ಬಾರದಿರುವುದರ ವಿರುದ್ಧ ಈ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದರು.

ಆರ್ಥಿಕವಾಗಿ ಬಡವರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.50ರಷ್ಟು ಮಂದಿ ಈಗಲೂ ಟಾರ್ಪಾಲು, ಮುಳಿಹುಲ್ಲು ಹಾಗೂ ಮುರುಕಲು ಗುಡಿಸಲುಗಳಲ್ಲಿ ವಾಸವಾಗಿದ್ದು, ಸಚಿವರ ಹೇಳಿಕೆಯಂತೆ ಮನೆ ನಿರ್ಮಾಣಕ್ಕಾಗಿ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತಿದ್ದರೂ ಸ್ವಂತ ಮನೆ ಎಂಬುದು ಅವರಿಗೆ ಕನಸಿನ ಮಾತಾಗಿದೆ ಎಂದು ದೂರಿದರು.

ಈಗಿನ ದರದಲ್ಲಿ 600ಚ.ಮೀ. ಮನೆಗೆ ಕನಿಷ್ಠ 9ಲಕ್ಷರೂ. ವೆಚ್ಚವಾಗುತ್ತದೆ.  ಆದರೂ ಸಚಿವರು ಘೋಷಿಸಿದ 7 ಲಕ್ಷ ರೂ.ಗಳ ಸಹಾಯಧನವಿನ್ನೂ ಅನುಷ್ಠಾನಗೊಂಡಿಲ್ಲ. ಹಿಂದಿನ ಸಹಾಯಧನಕ್ಕೆ ಕೇವಲ 25 ಸಾವಿರ ರೂ.ಗಳನ್ನು ಹೆಚ್ಚಿಸಿ ಎರಡು ಲಕ್ಷ ರೂ.ನೀಡಲಾಗುತ್ತದೆ. ಇದರಿಂದ ಮನೆ ಕಟ್ಟಲು ಸಾಧ್ಯವೇ ಇಲ್ಲ ಎಂದು ವಿಶ್ವನಾಥ ಪೇತ್ರಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಬರುವ ಎಸ್‌ಟಿಎಸ್‌ಎಫ್ ನಿಧಿಯನ್ನು ವಸತಿ ನಿಗಮಕ್ಕೆ ನೀಡಿ ಬಡವರಿಗೆ ಮನೆಕಟ್ಟಲು 7 ಲಕ್ಷರೂ.ಸಹಾಯಧನ ನೀಡಿ ಎಂದರೆ ಕೇವಲ 25 ಸಾವಿರ ರೂ.ಹೆಚ್ಚಿಸಲಾಗಿದೆ. ಇಲಾಖೆಗೆ ಬಂದ 29,000ಕೋಟಿ ರೂ.ಗಳನ್ನು ವಾರಾಹಿ ಯೋಜನೆಗೆ ವರ್ಗಾಯಿಸಲಾಗಿದೆ. ಅಲ್ಲಿ ಕೊಳವೆ ಬಾವಿ ತೋಡಲು ಎರಡು ಲಕ್ಷ ರೂ. ಬದಲು 8 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಅಲ್ಲದೇ ಸ್ವಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೈಕ್ ಹಾಗೂ ಸ್ಕೂಟರ್‌ಗಳನ್ನು ವಿತರಿಸಲಾಗುತ್ತಿದೆ. ಇದನ್ನೆಲ್ಲಾ ಚುನಾವಣೆಯ ದೃಷ್ಟಿಯಿಂದ ಮಾಡಲಾಗುತ್ತದೆ ಎಂದು ವಿಶ್ವನಾಥ ಪೇತ್ರಿ ಆರೋಪಿಸಿದರು.  

ಈ ಎಲ್ಲಾ ಕಾರಣಗಳಿಂದ ಮಾ.26ರಂದು ಬೆಳಗ್ಗೆ 10ಗಂಟೆಯಿಂದ ಸಚಿವರ ಮನೆ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಅಂಬೇಡ್ಕರ್ ಆವಾಜ್ ಮನೆಗೆ 7 ಲಕ್ಷ ರೂ.ಸಹಾಯಧನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿ, ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಗ್ರಾಪಂಗಳಿಗೆ ಆದೇಶ ನೀಡುವವರೆಗೂ ಧರಣಿ ಮುಂದುವರಿಯುವುದು ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳಾದ ವಿಘ್ನೇಶ ಬ್ರಹ್ಮಾವರ, ಶ್ರೀನಿವಾಸ ನಡೂರು, ಸುಬ್ರಹ್ಮಣ್ಯ, ಜ್ಯೋತಿ ಶಿರಿಯಾರ, ಪ್ರಕಾಶ್ ಹೇರೂರು ಉಪಸ್ಥಿತರಿದ್ದರು.

Similar News