ಉಡುಪಿ: ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನದ ಯಕ್ಷಗಾನ-ತಾಳಮದ್ದಲೆ ಸಪ್ತಾಹಕ್ಕೆ ಚಾಲನೆ

Update: 2023-03-21 06:10 GMT

ಉಡುಪಿ, ಮಾ.21: ಉಜಿರೆಯ ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತಪರ್ವ ತಾಳಮದ್ದಳೆ ಶತಕ ಸರಣಿ, ಗುರಿಕ್ಕಾರ ನೆಡ್ಲೆ ನರಸಿಂಹ ಭಟ್ಟರ 'ಸಂಸ್ಮೃತಿ' ಯಕ್ಷಗಾನ-ತಾಳಮದ್ದಲೆ ಸಪ್ತಾಹ ಸೋಮವಾರ ಆರಂಭಗೊಂಡಿತು.

ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಪ್ತಾಹಕ್ಕೆ ಸೋಮವಾರ ಸಂಜೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಅನುಗ್ರಹದೊಂದಿಗೆ ಮಠದ ದಿವಾನ ವರದರಾಜ ಭಟ್ ಕಿನ್ನಿಮೂಲ್ಕಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಭಾಗವತ ದಿನೇಶ ಅಮ್ಮಣ್ಣಾಯ ಉಪಸ್ಥಿತರಿದ್ದರು.

ಶ್ರೀ ಮಠದ ಮ್ಯಾನೇಜರ್ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನೆಯ ಬಳಿಕ ಶ್ರೀ ಕೃಷ್ಣ ರಸಾಯನಮ್ 'ಸ್ಯಮಂತಕಮಣಿ' ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ, ದಿನೇಶ ಅಮ್ಮಣ್ಣಾಯ ಬಿ., ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ, ಮುಮ್ಮೇಳದಲ್ಲಿ ಜಾಂಬವ - ಉಜಿರೆ ಅಶೋಕ ಭಟ್, ಕೃಷ್ಣ - ಪವನ್ ಕಿರಣ್ಕೆರೆ, ಬಲರಾಮ - ಶೇಣಿ ವೇಣುಗೋಪಾಲ ಭಟ್ ಭಾಗವಹಿಸಿದ್ದರು.

ಮಾ.21ರಂದು ಹರಿ ದರ್ಶನ, ಮಾ.22ರಂದು ಕರ್ಣ ಭೇದನ, ಮಾ.23ರಂದು ಗಾಂಡೀವಿ ಪ್ರತಿಜ್ಞೆ, ಮಾ.24ರಂದು ವಿದುರಾತಿಥ್ಯ, ಮಾ.25ರಂದು ಸುದರ್ಶನಗ್ರಹಣ ಮತ್ತು ಮಾ.26ರಂದು ಕೃಷ್ಣ ದರ್ಶನ ಎಂಬ ತಾಳೆಮದ್ದಳೆ ನಡೆಯಲಿದೆ. ಕಾರ್ಯಕ್ರಮವು ಪ್ರತಿದಿನ ಸಂಜೆ 7ರಿಂದ ರಾತ್ರಿ 9:45ರವರೆಗೆ ಇರಲಿದೆ.

Similar News