ಉಡುಪಿ: ವಿಮಾ ಪಿಂಚಣಿದಾರರ ಸಂಘದ ಮಹಾಧಿವೇಶನ

ಪಿಂಚಣಿ ಹೆಚ್ಚಿಸುವ ಶಿಫಾರಸ್ಸನ್ನು ಕೂಡಲೇ ಅನುಷ್ಠಾನಕ್ಕೆ ತನ್ನಿ: ಸರಕಾರಕ್ಕೆ ಪ್ರಭಾಕರ ಕುಂದರ್ ಆಗ್ರಹ

Update: 2023-03-21 15:35 GMT

ಉಡುಪಿ: ಕುಟುಂಬ ಪಿಂಚಣಿದಾರರ ಪಿಂಚಣಿಯನ್ನು ಹೆಚ್ಚಿಸಲು ಎಲ್ಲೈಸಿ ಆಡಳಿತ ಮಂಡಳಿ ಮಾಡಿರುವ  ಶಿಫಾರಸ್ಸನ್ನು ಕೇಂದ್ರ ಸರಕಾರ ಅಂಗೀಕರಿಸಿ ಕೂಡಲೇ ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕುಂದರ್ ಸರಕಾರವನ್ನು ಆಗ್ರಹಿಸಿದ್ದಾರೆ.

ಉಡುಪಿ ವಿಭಾಗದ ವಿಮಾ ಪಿಂಚಣಿದಾರರ ಸಂಘದ 25ನೇ ವಾರ್ಷಿಕ ಮಹಾಧಿವೇಶನದಲ್ಲಿ ಅವರು ಮಾತನಾಡುತಿದ್ದರು. ಈ ಕುರಿತು ವಿಮಾ ನೌಕರರ ಸಂಘಟನೆಗಳು ಹಮ್ಮಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಪಿಂಚಣಿದಾರರಿಗೆ ಕರೆಯಿತ್ತರು.

ವಿಮಾ ನೌಕರರ ಸಂಘದ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲಮೂರ್ತಿ ಆಚಾರ್ಯ ಹಿಂದಿನ ವರ್ಷದ ವರದಿಯನ್ನು ಸಭೆಯ ಮುಂದೆ ಮಂಡಿಸಿದರು. ವರದಿ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. 

ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್, ಹಳೆಯ ಪಿಂಚಣಿಯ ಮರುಜಾರಿಗೆ ಇತರ ಸಂಘಟನೆಗಳ ಜೊತೆ ದೇಶವ್ಯಾಪೀ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದರು.

ಬಳಿಕ ನೂತನ ವರ್ಷದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎ. ಮಧ್ವರಾಜ ಬಲ್ಲಾಳ್, ಉಪಾಧ್ಯಕ್ಷರಾಗಿ ತಿಮ್ಮಪ್ಪ ಮತ್ತು ಬಿ.ಎನ್. ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ  ವಿಠಲಮೂರ್ತಿ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರೀಪತಿ ಉಪಾಧ್ಯ ಮತ್ತು ಖಜಾಂಚಿಯಾಗಿ ದೇವಣ್ಣ ಪೈ ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಎ.ಮಧ್ವರಾಜ ಬಲ್ಲಾಳ ವಹಿಸಿದ್ದರು.

Similar News