ಉಡುಪಿ: ಸ್ವರ್ಣ, ಸೀತಾ ನದಿಯ ಕೃಷಿ ಪಂಪ್‌ಸೆಟ್‌ಗಳಿಗೆ 23ರಿಂದ ವಾರದಲ್ಲಿ ಒಂದು ದಿನ ಮಾತ್ರ ವಿದ್ಯುತ್

Update: 2023-03-21 16:45 GMT

ಉಡುಪಿ: ಉಡುಪಿ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನ ಹಾಗೂ ಹೆಬ್ರಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಸೀತಾ ನದಿಯ ಅಕ್ಕಪಕ್ಕದಲ್ಲಿ ಇರುವ ಕೃಷಿ ಪಂಪ್‌ಸೆಟ್‌ಗಳಿಗೆ  ಮಾ.23ರಿಂದ ಅನ್ವಯವಾಗುವಂತೆ ವಾರದ 7 ದಿನಗಳ ಬದಲಿಗೆ ವಾರದಲ್ಲಿ ಒಂದು ದಿನ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾ.15ರಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಸಾಲಿನ ಬೇಸಿಗೆಯ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಉಂಟಾಗ ಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ತಗ್ಹಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಮೂಲಗಳಾದ ನದಿ ನೀರನ್ನು ಸಂರಕ್ಷಿಸುವ ಸಲುವಾಗಿ ಸ್ವರ್ಣ ನದಿಯ ಬಜೆ ಅಣೆಕಟ್ಟು ಹಾಗೂ ಹೆಬ್ರಿ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸೀತಾನದಿ ಅಕ್ಕಪಕ್ಕದಲ್ಲಿರುವ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಪಂಪ್‌ಸೆಟ್‌ಗಳಿಂದ ಪ್ರತಿದಿನ ನೀರನ್ನು ಬಳಸುವು ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದಕ್ಕಾಗಿ ಈಗ ವಾರದ 7 ದಿನಗಳ ಕಾಲ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್‌ನ ಬದಲು ಗುರುವಾರದಿಂದ ವಾರದಲ್ಲಿ ಒಂದು ದಿನ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News