ಡಬ್ಲ್ಯುಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ಗೆ

Update: 2023-03-21 17:56 GMT

 ಮುಂಬೈ, ಮಾ.21: ಆಲಿಸ್ ಕ್ಯಾಪ್ಸಿ (34 ರನ್, 31 ಎಸೆತ, 3-26) ಆಲ್‌ರೌಂಡ್ ಆಟ, ನಾಯಕಿ ಮೆಗ್ ಲ್ಯಾನಿಂಗ್(39 ರನ್, 23 ಎಸೆತ), ಮರಿಝಾನ್ ಕಾಪ್(ಔಟಾಗದೆ 34,31 ಎಸೆತ ) ಹಾಗೂ ಶೆಫಾಲಿ ವರ್ಮಾ(21 ರನ್, 16 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಬ್ಲುಪಿಎಲ್‌ನ 20ನೇ ಪಂದ್ಯದಲ್ಲಿ ಯುಪಿ ವಾರಿಯಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿತು.ಮಾ.26ರಂದು ನಡೆಯುವ ಫೈನಲ್‌ಗೆ ನೇರ ಪ್ರವೇಶ ಪಡೆಯಿತು.
  
ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 139 ರನ್ ಗುರಿ ಪಡೆದಿದ್ದ ಡೆಲ್ಲಿ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಕ್ಯಾಪ್ಸಿ ಹಾಗೂ ಕಾಪ್ 60 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಡೆಲ್ಲಿ 8 ಪಂದ್ಯಗಳಲ್ಲಿ 6ನೇ ಗೆಲುವು ದಾಖಲಿಸಿ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 

ಮುಂಬೈ ತಂಡ ಮಾ.24ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಫೈನಲ್‌ಗೆ ಲಗ್ಗೆ ಇಡುತ್ತದೆ.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಾರಿಯರ್ಸ್ ತಂಡ ತಹ್ಲಿಯಾ ಮೆಕ್‌ಗ್ರಾತ್ ಅರ್ಧಶತಕದ(58 ರನ್, 32 ಎಸೆತ)ಹೊರತಾಗಿಯೂ ಆಲಿಸ್ ಕ್ಯಾಪ್ಸಿ (3-26) ಹಾಗೂ ರಾಧಾ ಯಾದವ್(2-28) ನಿಖರ ಬೌಲಿಂಗ್‌ಗೆ ಕಂಗಾಲಾಗಿ ನಿಗದಿತ 20 ಓವರ್‌ಗಳಲ್ಲಿ 138 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಅಲಿಸಾ ಹೀಲಿ(36 ರನ್, 34 ಎಸೆತ), ಶ್ವೇತಾ ಸೆಹ್ರಾವತ್(19 ರನ್, 12 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

Similar News