ಫೆಲೆಸ್ತೀನಿ ಸಂಸ್ಕೃತಿ ಎಂಬುದೇ ಇರಲಿಲ್ಲ: ಇಸ್ರೇಲ್ ಸಚಿವರ ವಿವಾದಾತ್ಮಕ ಹೇಳಿಕೆ

Update: 2023-03-21 17:48 GMT

ಟೆಲ್ಅವೀವ್, ಮಾ.21: ಫೆಲೆಸ್ತೀನೀಯರ ಇತಿಹಾಸ ಅಥವಾ ಸಂಸ್ಕೃತಿ ಎಂಬುದು ಇರಲಿಲ್ಲ. ಅಷ್ಟೇ ಅಲ್ಲ, ಫೆಲೆಸ್ತೀನಿ ಜನ ಎಂಬ ವಿಷಯವೂ ಇರಲಿಲ್ಲ. ಇವೆಲ್ಲವೂ ಕಳೆದ ಶತಮಾನದ ಆವಿಷ್ಕಾರಗಳಾಗಿವೆ ಎಂದು ಇಸ್ರೇಲ್ ನ ಹಣಕಾಸು ಸಚಿವ ಬೆಝಾಲೆಲ್ ಸ್ಮೋರ್ಟಿಚ್ ಹೇಳಿದ್ದಾರೆ. 

ಈ ಹೇಳಿಕೆಗೆ ವ್ಯಾಪಕ ಖಂಡನೆ ಮತ್ತು ವಿರೋಧ ವ್ಯಕ್ತವಾಗಿದೆ. ರವಿವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಂದರ್ಭ ಸಚಿವ ಸ್ಮೋರ್ಟಿಚ್ ‘ಫೆಲೆಸ್ತೀನ್ ಇತಿಹಾಸ ಅಥವಾ ಸಂಸ್ಕೃತಿ ಎಂಬುದು ಇತ್ತೇ? ಇಲ್ಲ, ಯಾವುದೂ ಇರಲಿಲ್ಲ. ಫೆಲೆಸ್ತೀನಿ ಜನತೆ ಎಂಬ ವಿಷಯವೂ ಇರಲಿಲ್ಲ. ಫೆಲೆಸ್ತೀನ್ ಜನ ಎಂಬುದು ಕೃತಕ ಕಲ್ಪನೆಯಾಗಿದೆ ಎಂದು ಹೇಳಿದ್ದಾರೆ. ಅವರು ಸುದ್ಧಿಗೋಷ್ಟಿ ನಡೆಸುತ್ತಿದ್ದ ವೇದಿಕೆಯಲ್ಲಿ ಬದಲಾವಣೆ ಮಾಡಿದ್ದ ಇಸ್ರೇಲ್ ಧ್ವಜವನ್ನು ಅಳವಡಿಸಲಾಗಿದ್ದು ಅದರಲ್ಲಿ ಪಶ್ಚಿಮ ದಂಡೆ, ಪೂರ್ವ ಜೆರುಸಲೇಂ, ಗಾಝಾ ಮತ್ತು ಜೋರ್ಡಾನ್ಗಳನ್ನು ಇಸ್ರೇಲ್ ಗಡಿಭಾಗದೊಳಗೆ ತೋರಿಸಲಾಗಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. 

ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರದಲ್ಲಿ ಪ್ರಭಾವೀ ಸಚಿವರಾಗಿರುವ ಸ್ಮೋರ್ಟಿಚ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಹೇಳಿಕೆಯು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉದ್ದೇಶ ಹೊಂದಿದೆ ಎಂದು ಫೆಲೆಸ್ತೀನಿಯನ್ ಪ್ರಧಾನಿ ಮುಹಮ್ಮದ್ ಸ್ತಯೆಹ್ ಖಂಡಿಸಿದ್ದಾರೆ. ಫೆಲೆಸ್ತೀನಿಯನ್ ಜನರ ಅಸ್ತಿತ್ವವನ್ನು ಮತ್ತು ಅವರ ತಾಯ್ನಾಡಿನಲ್ಲಿ ಅವರ ಕಾನೂನುಬದ್ಧ ರಾಷ್ಟ್ರೀಯ ಹಕ್ಕುಗಳನ್ನು ನಿರಾಕರಿಸುವ ಮೂಲಕ ಇಸ್ರೇಲಿ ಮುಖಂಡರು ನಮ್ಮ ಜನರ ವಿರುದ್ಧ ಯೆಹೂದಿ ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ವಿದೇಶಾಂಗ ಇಲಾಖೆ ಟೀಕಿಸಿದೆ. ಜೋರ್ಡಾನ್, ಈಜಿಪ್ಟ್, ಯುರೋಪಿಯನ್ ಯೂನಿಯನ್, ಅಮೆರಿಕ ದೇಶಗಳೂ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಮೊರ್ಟಿಚ್, ತಾನು ತಪ್ಪು ಪದ ಬಳಸಿದ್ದೇನೆ ಎಂದಿದ್ದಾರೆ, ಆದರೆ ಈ ಹೇಳಿಕೆಗೆ ಕ್ಷಮೆ ಯಾಚಿಸಿಲ್ಲ. ಬಳಿಕ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿರುವ ಇಸ್ರೇಲ್ ವಿದೇಶಾಂಗ ಇಲಾಖೆ ‘ ತಾನು ಜೋರ್ಡಾನ್ ಜತೆಗಿನ 1994ರ ಶಾಂತಿ ಮಾತುಕತೆಗೆ ಬದ್ಧವಾಗಿರುವುದಾಗಿ ಹೇಳಿದೆ.

Similar News