​ಕೆಮ್ಮಣ್ಣು: ತೋನ್ಸೆ ಗ್ರಾಪಂನಿಂದ ಅಕ್ರಮ ಪಾಗಾರ ತೆರವು

Update: 2023-03-21 18:33 GMT

ಉಡುಪಿ: ತೋನ್ಸೆ ಗ್ರಾಪಂ ವ್ಯಾಪ್ತಿಯ ಕೆಮ್ಮಣ್ಣು ಹಿಂದೂ ಶಾಲಾ ಕಟ್ಟಡದ ಪಡುಬದಿಯಿಂದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಗ್ರಾಪಂ ಪರವಾನಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಪಾಗಾರವನ್ನು ಗ್ರಾಪಂನಿಂದ ಪೊಲೀಸ್ ರಕ್ಷಣೆಯೊಂದಿಗೆ ಇತ್ತೀಚೆಗೆ ತೆರವು ಗೊಳಿಸಲಾಯಿತು.

ಕೆಮ್ಮಣ್ಣು ನಿವಾಸಿ ಗಣೇಶ್ ಆಚಾರ್ ಎಂಬವರ ಈ ಅಕ್ರಮ ರಚನೆಯನ್ನು ಸುಮಾರು 3 ವರ್ಷಗಳ ಹಿಂದೆ ನಡೆಸಲು ಮುಂದಾಗಿದ್ದರು. ಈ ಅಕ್ರಮದ ಬಗ್ಗೆ ಪಿ.ಮಾಧವರಾವ್ ಎಂಬವರು ಸಾರ್ವಜನಿಕರ ಸಹಿ ಇರುವ ಪತ್ರ ದೊಂದಿಗೆ ಗ್ರಾಪಂ ಗಮನಕ್ಕೆ ತಂದಿದ್ದರು. ಗ್ರಾಪಂನಿಂದ ಈ ಅಕ್ರಮ ರಚನೆಯನ್ನು ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿತ್ತು. ಆದರೂ ಅವರು ತೆರವು ಮಾಡಿರಲಿಲ್ಲ. 

ಬಳಿಕ ಸಮಸ್ಯೆಯ ಸೌಹಾರ್ದಯುತ ಪರಿಹಾರಕ್ಕೆಂದು ಕರೆದ ವಿಶೇಷ ಸಭೆಯಲ್ಲಿ ಗಣೇಶ್ ಆಚಾರ್ ತಾನೇ ತೆರವುಗೊಳಿಸುವುದಾಗಿ ವಾಗ್ದಾನ ನೀಡಿದ್ದರು. ಆದರೂ ಅವರು ತೆರವಿಗೆ ಮುಂದಾಗುವ ಸೂಚನೆಗಳು ಕಂಡು ಬಂದಿರಲಿಲ್ಲ. ಮತ್ತೆ ಸಭೆಯ ನಿರ್ಣಯ ತಿಳಿಸುವ ಪತ್ರ ಬರೆದು ಒಂದು ವಾರದ ಕಾಲಾವಕಾಶವನ್ನು ನೀಡಿ ಅಂತಿಮ ನೋಟೀಸ್ ಕಳುಹಿಸಲಾಗಿತ್ತು.

ಜಿಪಂ ಮತ್ತು ತಾಪಂ ಅಧಿಕಾರಿಗಳು, ಮೂರು ವರ್ಷಗಳಿಂದ ಇರುವ ಅಕ್ರಮ ರಚನೆಯನ್ನು ಕೂಡಲೇ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಜೆಸಿಬಿ ತರಿಸಿ ಅಕ್ರಮ ರಚನೆಯನ್ನು ತೆರವು ಗೊಳಿಸಲಾಯಿತು. ಅಕ್ರಮ ರಚನೆಗೆ ಬಳಸಿದ ಕೆಂಪು ಕಲ್ಲುಗಳು ಮತ್ತು ಕಬ್ಬಿಣದ ಗೇಟುಗಳನ್ನು ಗ್ರಾಪಂನ ವಶಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್, ಸದಸ್ಯರಾದ ಯಶೋದಾ, ಆಶಾ, ಕುಸುಮ, ಸಂಧ್ಯಾ, ಮುಮ್ತಾಜ್, ವತ್ಸಲಾ ವಿನೋದ್, ಸುಜ್ಹಾನ ಡಿಸೋಜ, ಪ್ರತಿಭಾ, ಪುರಂದರ ಟಿ.ಕುಂದರ್, ಧೀರೇಂದ್ರ, ಮುಹಮ್ಮದ್ ಇದ್ರೀಸ್, ಹೈದರ್ ಅಲಿ, ಪ್ರಶಾಂತ್ ಕೆಮ್ಮಣ್ಣು, ಪಿಡಿಓ ಕಮಲಾ, ಕಾರ್ಯದರ್ಶಿ ದಿನಕರ್, ಸಿಬ್ಬಂದಿ ಸಂತೋಷ್, ಪ್ರಕಾಶ್, ಮಲ್ಪೆ ಎಎಸ್ಸೈ ರವೀಚಂದ್ರ ಮೊದಲಾದವರು ಹಾಜರಿದ್ದರು.

Similar News