ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಆಗ್ರಹಿಸಿ ತಂಝೀಮ್ ಸಂಸ್ಥೆಗೆ ಮಹಿಳೆಯರಿಂದ ಮನವಿ

ನೋಟಾ ಬಳಕೆಯ ಎಚ್ಚರಿಕೆ

Update: 2023-03-22 18:02 GMT

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಆಗ್ರಹಿಸಿ ಬುಧವಾರ ತಂಝೀಮ್ ಕಚೇರಿಗೆ ಭೇಟಿ ನೀಡಿ ಮಹಿಳೆಯರು ಮನವಿ ಮಾಡಿದ್ದಾರೆ. ತಂಝೀಮ್ ತನ್ನ ನಿರ್ಣಯದಿಂದ ಹಿಂದೆ ಸರಿಯದಿದ್ದರೆ ಚುನಾವಣೆಯಲ್ಲಿ ‘ನೋಟಾ’ ಮೊರೆಹೋಗಬೇಕಾದೀತೆಂದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ನಡೆಯುತ್ತಿರುವ ಚರ್ಚೆಯಲ್ಲಿ ಮಂಗಳವಾರ ಸಭೆ ಸೇರಿದ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆಯರು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಆಗ್ರಹಿಸಿದ್ದಾರೆ.

ಭಟ್ಕಳ ಯುತ್ ಗರ್ಲ್ಸ್ ವಿಂಗ್ ಸಂಘಟನೆಯ  ಆಯಿಶಾ ತುರ್ಫಾ ಅಜಾಯಿಬ್ ಎಂಬವರು ತಂಝೀಮ್ ಸಂಸ್ಥೆಗೆ ಮನವಿಯನ್ನು ಸಲ್ಲಿಸಿದ್ದು, ತಂಝೀಮ್ ತನ್ನ ನಿರ್ಣಯವನ್ನು ಮರುಪರಿಶೀಲಿಸುವುದರೊಂದಿಗೆ ಮುಸ್ಲಿಂ ಅಭ್ಯರ್ಥಿಯ ಪರ ನಿರ್ಣಯವನ್ನು ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ತಂಝೀಮ್ ನ ಕಾರ್ಯಕಾರಿ ಸಮಿತಿ ಹಾಗೂ ರಾಜಕೀಯ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ. 

ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ಅನುಪಸ್ಥಿತಿಯಲ್ಲಿ ಮನವಿ ಪತ್ರ ಸ್ವೀಕರಿಸಿದ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ತಮ್ಮ ಬೇಡಿಕೆಯನ್ನು ಕಾರ್ಯಕಾರಿ ಸಭೆಯಲ್ಲಿ ಇಡುವುದಾಗಿ ತಿಳಿಸಿದರು. 

Similar News