ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ: ಭಟ್ಕಳ‌ದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ

Update: 2023-03-23 14:53 GMT

ಭಟ್ಕಳ: ಮೊಗೇರ ಸಮುದಾಯದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 365 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೋರಾಟದ ಭಾಗವಾಗಿ ಗುರುವಾರ ಮೊಗೇರ್ ಸಮುದಾಯದ ಸಾವಿರಾರು ಜನರು ಭಟ್ಕಳ‌ದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೌಲಭ್ಯಕ್ಕಾಗಿ ಬೇಡಿಕೆ ಸಲ್ಲಿಸಿ ಒಂದು ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಕಾರನ್ನು ಅಡ್ಡ ಹಾಕಿ ಪ್ರತಿಭಟನೆ ನಡೆಸಿದರು.

ಬಳಿಕ ಸಚಿವರು ಹಾಗೂ ಸಂಬಂಧಪಟ್ಟ ಆಯೋಗದ‌ ಅಧಿಕಾರಿಗಳು ಜನರೊಂದಿಗೆ ಚರ್ಚೆ ನಡೆಸಿದ್ದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ ತೆರಳಿದ್ರೂ ಯಾವುದೇ ಕೆಲಸವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಿರ್ಧಾರ ಕೈಗೊಂಡು ತಮ್ಮ ಸಮುದಾಯವನ್ನು ಮತ್ತೆ ಎಸ್‌ಸಿ ಕ್ಯಾಟಗರಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಕಾರರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಆಕ್ರೋಶವನ್ನು ಹೊರಹಾಕಿ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ಬಳಿಕ ತಾಲೂಕಾ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದರು. ಈ ವೇಳೆ  ಪ್ರತಿಭಟನಕಾರರು ಪಾರ್ಕಿಂಗ್ ನಲ್ಲಿದ್ದ ಜಿಲ್ಲಾಧಿಕಾರಿಗಳ ಕಾರಿನ ಮುಂಭಾಗ ಕೂತು ಘೋಷಣೆ ಕೂಗಿದರು.

ಮನವಿ ಸ್ವೀಕಸಿ ತೆರಳಿದ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ ಜಿಲ್ಲಾಧಿಕಾರಿ ಪ್ರಭುಲಿಂಗ ಗವಳಿಕಟ್ಟೆಯವರಿಗೆ ಮೊಗೇರ ಸಮಾಜದ ಪ್ರತಿಭಟನಾಕಾರರು ಘೇರಾವ್ ಹಾಕಿದರು.

ಪ್ರತಿಭಟನೆಯಲ್ಲಿ ಭಟ್ಕಳ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ್, ಹೋರಾಟ ಸಮಿತಿಯ ಅಧ್ಯಕ್ಷ ಎಫ್ ಕೆ ಮೊಗೇರ, ಪ್ರಮುಖರಾದ ಶ್ರೀಧರ ಮೊಗೇರ, ಭಾಸ್ಕರ್ ಮೊಗೇರ, ಕೃಷ್ಣ ಮೊಗೇರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Similar News