ಬೆಲೆ ಏರಿಕೆಗೆ ವಿರೋಧ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಪಿಎಂ ಪ್ರತಿಭಟನೆ

Update: 2023-03-23 15:06 GMT

ಉಡುಪಿ, ಮಾ.23: ಅಗತ್ಯ ವಸ್ತುಗಳ ಬೆಲೆ ಎರಿಕೆ, ಗ್ಯಾಸ್, ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಲು ಒತ್ತಾಯಿಸಿ ಹಾಗೂ ಕಾರ್ಮಿಕ ಕಾನೂನು ವಿರೋಧಿಸಿ ಸಿಪಿಐ(ಎಂ) ಉಡುಪಿ ವಲಯ ಸಮಿತಿಯ ನೇತೃತ್ವದಲ್ಲಿ ಇಂದು ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಅಣುಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು. 

ಜನರ ದಿನನಿತ್ಯ ಬದುಕಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್ ಕಾಯಿಲೆಯಿಂದ ಹಠಾತ್ತನೆ ಸಂಭವಿ ಸುತ್ತಿರುವ ಸಾವಿನ ಬಗ್ಗೆ ಸರಕಾರದ ನಿರ್ಲಕ್ಷ್ಯದ ಧೋರಣೆಯನ್ನು ಸಭೆಯಲ್ಲಿ  ಪ್ರತಿಭಟನಕಾರರು ಖಂಡಿಸಿದರು.

ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜೊಂದನ್ನು ಮಂಜೂರು ಮಾಡಬೇಕು. ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸ ಲಾಯಿತು.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದರೂ, ದೇಶದ ಉದ್ಧಾರಕ್ಕೆಂದು ಗ್ಯಾಸ್ ಹಾಗೂ ತೈಲಗಳ ಬೆಲೆಯನ್ನು ಏರಿಸುತ್ತಿರುವುದನ್ನು, ಜನರಿಂದ ಸುಲಿದ ಹಣ ಅದಾನಿ, ಅಂಬಾನಿಗೆ ಹೋಗುತ್ತಿರುವುದನ್ನು ಖಂಡಿಸಲಾಯಿತು.

ಸುರತ್ಕಲ್ ಟೋಲ್ ಬಂದ್ ಆಗಿ ಮೂರು ತಿಂಗಳ ಕಳೆದರೂ ಸುರತ್ಕಲ್ ಮೂಲಕ ಹಾದು ಹೋಗುವ ಬಸ್‌ಗಳ ಟಿಕೇಟ್ ದರವನ್ನು ಕಡಿತ ಮಾಡದಿ ರುವುದನ್ನು ಪ್ರತಿಭಟನಕಾರರು ಖಂಡಿಸಿದರು. ಒಂದು ಅಂದಾಜಿನ ಪ್ರಕಾರ ಬಸ್‌ಗಳ ಮಾಲಕರಿಗೆ ಪ್ರತಿದಿನ 2 ಲಕ್ಷ ರೂ.ಉಳಿತಾಯವಾಗುತ್ತಿದೆ ಎಂದವರು ದೂರಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ ಎಸ್, ಪಕ್ಷದ ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ ಗೊಲ್ಲ, ಸಮಿತಿ ಸದಸ್ಯರಾದ ನಳಿನಿ, ವಿಶ್ವನಾಥ ಕೆ., ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಉಡುಪಿ ಜಿಲ್ಲಾ ಕಟ್ಟಡ ಸಂಘದ ಮುಖಂಡರಾದ ಸುಭಾಷ್ ನಾಯಕ್, ಗಣೇಶ ನಾಯಕ್, ವಾಮನ ಪೂಜಾರಿ ಹಾಗೂ ಸಿಐಟಿಯು ಜಿಲ್ಲಾ ಮುಖಂಡರಾದ  ಉಮೇಶ್, ವಿದ್ಯಾರಾಜ್, ಪ್ರಭಾಕರ್, ಮುರಳಿ, ಸೈಯದ್ ಮುಂತಾದವರು ಉಪಸ್ಥಿತರಿದ್ದರು.

Similar News