ಆನ್ಲೈನ್ ಜೂಜು ನಿಷೇಧ ವಿಧೇಯಕ: ತಮಿಳುನಾಡು ಅಸೆಂಬ್ಲಿ ಮರು ಅಂಗೀಕಾರ

Update: 2023-03-23 17:02 GMT

ಚೆನ್ನೈ, ಮಾ.23: ಆನ್ಲೈನ್ ಜೂಜನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶ ಹೊಂದಿರುವ 2022ರ ಆನ್ಲೈನ್ ಜೂಜು ನಿಷೇಧ ಹಾಗೂ ಆನ್ಲೈನ್ ಗೇಮ್ಸ್ ನಿಯಂತ್ರಣ ಅಧ್ಯಾದೇಶವನ್ನು ತಮಿಳುನಾಡು ವಿಧಾನಸಭೆಯು ಗುರುವಾರ ಅವಿರೋಧವಾಗಿ ಮರು ಅಂಗೀಕರಿಸಿದೆ. 2022ರ ಆಕ್ಟೋಬರ್ 19ರಂದು ಈ ವಿಧೇಯಕವನ್ನು ಮೊದಲ ಬಾರಿಗೆ ಅಂಗೀಕರಿಸಲಾಗಿತ್ತು. ಆದರೆ ರಾಜ್ಯಪಾಲ ಆರ್.ಎನ್.ರವಿ ಅವರು ಮಾರ್ಚ್ 8ರಂದು ವಿಧೇಯಕವನ್ನು ಮರುಪರಿಶೀಲಿಸಲು ಸರಕಾರಕ್ಕೆ ಹಿಂತಿರುಗಿಸಿದ್ದರು.

 ವಿಧೇಯಕದಲ್ಲಿನ ಅಂಶಗಳ ಬಗ್ಗೆ ಮಾಹಿತಿಯನ್ನು ಕೋರಿದ್ದ ರಾಜ್ಯಪಾಲರು ಪ್ರಸ್ತಾವಿತ ಕಾನೂನಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಿದ್ದರು.

ವಿಧೇಯಕವನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧೇಯಕನ್ನು ಅವಿರೋಧವಾಗಿ ಅಂಗೀಕರಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಆನ್ಲೈನ್ ಜೂಜಿನಿಂದಾಗಿ ಭಾರೀ ಮೊತ್ತದ ಹಣವನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳನ್ನು ಉಲ್ಲೇಖಿಸಿದ ಅವರು . ‘‘ ಈ ವಿಧೇಯಕವನ್ನು ಮನಪೂರ್ವಕವಾಗಿ ಮಾತ್ರವಲ್ಲ ಹೃದಯಪೂರ್ವಕವಾಗಿ ಅಂಗೀಕರಿಸಬೇಕಾಗಿದೆ’’ ಎಂದು ಹೇಳಿದರು.

ಹೀಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹಲವರು ಮಂದಿ ಆನ್ಲೈನ್ ಜೂಜನ್ನು ನಿಷೇಧಿಸಬೇಕೆಂದು ಡೆತ್ನೋಟ್ನಲ್ಲಿ ಬರೆದಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು. ಆನ್ಲೈನ್ ಗೇಮಿಂಗ್ ಮಕ್ಕಳ ಅಧ್ಯಯನಕ್ಕೆ ಅಡ್ಡಿಪಡಿಸುತ್ತದೆ ಎಂದು ಶೇ.64ರಷ್ಟು ಶಿಕ್ಷಕರು ಭಾವಿಸಿದ್ದಾರೆಂಬ ರಾಜ್ಯ ಶಿಕ್ಷಣ ಇಲಾಖೆಯ ವರದಿಯನ್ನು ಕೂಡಾ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದರು.

ಆನ್ಲೈನ್ ಜೂಜು ಬಗ್ಗೆ ಸರಕಾರಕ್ಕೆ ಸಾರ್ವಜನಿಕರಿಂದ 10,785 ಈಮೇಲ್ಗಳು ಬಂದಿದ್ದು, ಅವುಗಳಲ್ಲಿ ಕೇವಲ 27 ಮಂದಿ ಆನ್ಲೈನ್ ಜೂಜು ನಿಷೇಧನ್ನು ವಿರೋಧಿಸಿದ್ದರು’’ ಎಂದು ಸ್ಟಾಲಿನ್ ಸದನಕ್ಕೆ ತಿಳಿಸಿದರು.

‘‘ ಸಿದ್ಧಾಂತಗಳು ಹಾಗೂ ರಾಜಕೀಯದ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಜೂಜುಗಾರಿಕೆಯು ಜನರನ್ನು ಕೊಲ್ಲುತ್ತದೆಯೆಂಬುದರ ಬಗ್ಗೆ ಹೃದಯವಿದ್ದವರ್ಯಾರಿಗೂ ಭಿನ್ನಾಭಿಪ್ರಾಯ ಇರಲಾರದು ಎಂದರು. ಬೆಟ್ಟಿಂಗ್ ಹಾಗೂ ಜೂಜು, ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳೆಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿರುವುದನ್ನು ಸ್ಟಾಲಿನ್ ಅವರು ಸದನದಲ್ಲಿ ಉಲ್ಲೇಖಿಸಿದರು.

Similar News