ವ್ಯವಸ್ಥೆಯ ಒಳಚರಂಡಿಗಳಿಗೆ ಇನ್ನೆಷ್ಟು ಕಾರ್ಮಿಕರ ಬಲಿ?

Update: 2023-03-24 04:08 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನಾಡು ಯುಗಾದಿಯ ಸಂಭ್ರಮವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ, ದಾವಣಗೆರೆಯ ಜಗಳೂರಿನಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಾ ಪೌರಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಚರಂಡಿ ಶುಚಿಗೊಳಿಸಲು ಕಾರ್ಮಿಕರನ್ನು ಇಳಿಸುವ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಮುಂಜಾಗರೂಕತೆಯ ಕ್ರಮ ತೆಗೆದುಕೊಂಡಿಲ್ಲದೇ ಇರುವುದು ಜೊತೆಗೇ ಬೆಳಕಿಗೆ ಬಂದಿದೆ. ಕೈಗವಸು, ಮುಖಗವಸು ಇಲ್ಲದೆ ಕಾರ್ಮಿಕರು ಚರಂಡಿಗೆ ಇಳಿದಿದ್ದು, ಕೊಳೆತಿದ್ದ ತ್ಯಾಜ್ಯದಿಂದ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಈ ಮರಣ ಆಕಸ್ಮಿಕ ಅವಘಡವಲ್ಲ. ಅವರನ್ನು ಯಾವ ಭದ್ರತೆಯೂ ಇಲ್ಲದೆ ಚರಂಡಿಗಿಳಿಸುವ ಮೂಲಕ ಅಧಿಕಾರಿಗಳು ನಡೆಸಿದ ಕೊಲೆಯಿದು.

ಇಂತಹ ಕೊಲೆಗಳು ಪದೇ ಪದೇ ಸಂಭವಿಸುತ್ತವೆಯಾದರೂ, ವ್ಯವಸ್ಥೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕಾರ್ಖಾನೆಯೊಂದರಲ್ಲಿ ಅಥವಾ ಐಟಿ ಕಂಪೆನಿಗಳಲ್ಲಿ ಏನಾದರೂ ಅವಘಡ ಸಂಭವಿಸಿ ಅಲ್ಲಿ ನೌಕರರ ಸಾವು ನೋವಾದರೆ ಅವುಗಳಿಗೆ ಸಮಾಜ ಸ್ಪಂದಿಸುವ ಬಗೆಯೇ ಒಂದಾದರೆ, ಬೀದಿಯಲ್ಲಿ ಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಭವಿಸುವ ಸಾವುಗಳಿಗೆ ಸ್ಪಂದಿಸುವ ತಾರತಮ್ಯದ ಬಗೆಯೇ ಇನ್ನೊಂದು. ಮಲದ ಗುಂಡಿಯಲ್ಲಿ, ಚರಂಡಿಯಲ್ಲಿ ಸಾಯುವವರ ಹಿಂದಿರುವ ಜಾತಿ ಸ್ಥಾನಮಾನ ಇದಕ್ಕೆ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಮಾತು ಮಾತಿಗೆ ಅಭಿವೃದ್ಧಿ ಪದಗಳನ್ನು ರಾಜಕಾರಣಿಗಳು ಬಳಸುತ್ತಿದ್ದಾರೆ. ಆದರೆ ನಮ್ಮ ಒಳಚರಂಡಿಗಳು ಅಭಿವೃದ್ಧಿಯ ಪ್ರಧಾನ ಭಾಗವೆನ್ನುವುದು ಇವರಿಗೆ ಯಾವತ್ತೂ ಅನ್ನಿಸಿಲ್ಲ. ಒಂದು ವೇಳೆ ಅನ್ನಿಸಿದ್ದಿದ್ದರೆ, ಇಂದು ಒಳಚರಂಡಿಯನ್ನು ಶುಚಿಗೊಳಿಸಲು ಅತ್ಯಾಧುನಿಕ ಯಂತ್ರಗಳು ನಮ್ಮ ನಡುವೆ ಇರುತ್ತಿದ್ದವು. ಏನಿಲ್ಲ ಎಂದರೂ, ಇಂತಹ ಒಳಚರಂಡಿಗಳಿಗೆ ಇಳಿಯುವ ಕಾರ್ಮಿಕರಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸುತ್ತಿದ್ದರು. ಈ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬದ ಭವಿಷ್ಯದ ಬಗ್ಗೆಯಾದರೂ ಸರಕಾರ ಗಂಭೀರವಾಗಿ ಯೋಚಿಸುತ್ತಿತ್ತು.

1993ರಿಂದ ಒಳಚರಂಡಿ ಅಥವಾ ಮಲ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನವಿದೆ. ಕಳೆದ 30 ವರ್ಷಗಳಲ್ಲಿ ಒಳಚರಂಡಿ, ಮಲದಗುಂಡಿ ಸ್ವಚ್ಛಗೊಳಿಸುವ ಸಂದರ್ಭ 1,035 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ಸರಕಾರವೇ ಇತ್ತೀಚೆಗೆ ಬಹಿರಂಗ ಪಡಿಸಿದೆ. ಇವು ಸರಕಾರದ ದಾಖಲೆಗಳಲ್ಲಿರುವ ಅಂಕಿ ಅಂಶಗಳಷ್ಟೇ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಾಗ ಅವುಗಳು ಬೆಳಕಿಗೆ ಬರುವುದೇ ಇಲ್ಲ. ದೇಶದಲ್ಲಿ ಮಲ ಹೊರುವ ಪದ್ಧತಿಯೇ ಇಲ್ಲ, ಸಂಪೂರ್ಣ ಅಳಿದು ಹೋಗಿದೆ ಎನ್ನುವುದನ್ನು ಸಾಬೀತು ಮಾಡಲು ಅಧಿಕಾರಿಗಳು ಹೆಣಗಾಡುತ್ತಿರುವಾಗ, ಮಲದ ಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ ಅದನ್ನು ಬಹಿರಂಗಪಡಿಸುವುದಾದರೂ ಹೇಗೆ? ಬಹಿರಂಗ ಪಡಿಸಿದರೆ ಅದು ಅಧಿಕಾರಿಗಳ ಕುತ್ತಿಗೆಗೆ ಉರುಳಾಗಬಹುದು. ಈ ಭಯದಿಂದ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ ಅಥವಾ ಸಾವಿಗೆ ಬೇರೆ ಅವಘಡವನ್ನು ತಳಕುಹಾಕಲಾಗುತ್ತದೆ. ಇನ್ನು ಸಂತ್ರಸ್ತರಿಗೆ ಸೂಕ್ತ ಪರಿಹಾರವಂತೂ ದೂರದ ಮಾತು. ಒಂದು ಲಕ್ಷ ರೂ. ಸಂತ್ರಸ್ತ ಕುಟುಂಬದ ಕೈ ಸೇರಿದರೆ ಅದುವೇ ಹೆಚ್ಚು. ನಮ್ಮ ದೇಶದಲ್ಲಿ ಮಲಹೊರುವುದಕ್ಕಾಗಿಯೇ ಒಂದು ಜಾತಿಯನ್ನು ನಿರ್ಮಾಣ ಮಾಡಲಾಗಿದೆ. ಒಳಚರಂಡಿಗಳನ್ನು ಶುಚಿಗೊಳಿಸುವುದಕ್ಕೂ ಇವರನ್ನೇ ಬಳಸಲಾಗುತ್ತದೆ. ಇಂತಹ ಕೆಲಸಗಳನ್ನು ನಿರಾಕರಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಈ ಜಾತಿಯ ಜನರಿಗೆ ದೈಹಿಕ, ಮಾನಸಿಕ ದೌರ್ಜನ್ಯಗಳನ್ನೆಸಗಲಾಗುತ್ತದೆ.

ಅಘೋಷಿತ ಬಹಿಷ್ಕಾರವನ್ನು ವಿಧಿಸಿ ಅವರನ್ನು ನಿರುದ್ಯೋಗಿಗಳನ್ನಾಗಿಸಿ ಬಿಡುತ್ತಾರೆ. ಮತ್ತೆ ಅದೇ ವೃತ್ತಿಗೆ ಇಳಿಯಬೇಕಾದ ಸ್ಥಿತಿಯನ್ನು ಸಮಾಜ ಅವರಿಗೆ ನಿರ್ಮಾಣ ಮಾಡುತ್ತದೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿದ್ದೇ ಆದರೆ, ಪರಿಹಾರದ ಬಲದಿಂದ ಕುಟುಂಬ ಈ ವೃತ್ತಿಯನ್ನು ತೊರೆದು ಹೊಸ ಬದುಕಿಗೆ ಕಾಲಿಟ್ಟೀತೆನ್ನುವ ಭಯವೂ ವ್ಯವಸ್ಥೆಗಿದೆ. ಆ ಕಾರಣದಿಂದಲೇ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕದಂತೆ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಲಾಗುತ್ತದೆ. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗ, ಸ್ವಚ್ಛತಾ ಆಂದೋಲನ ಭಾರೀ ಸುದ್ದಿ ಮಾಡಿತ್ತು. ಶುಚಿತ್ವಕ್ಕಾಗಿಯೇ ಸರಕಾರ ತೆರಿಗೆಯನ್ನೂ ಸಂಗ್ರಹಿಸಿತು. ಆದರೆ ಶುಚಿತ್ವಕ್ಕಾಗಿ ಮೀಸಲಿಟ್ಟ ಹಣವನ್ನು ಅಧಿಕಾರಿಗಳು, ರಾಜಕಾರಣಿಗಳು ತಿಂದು ತೇಗಿದರು. ನಿಜಕ್ಕೂ ಶುಚಿತ್ವ ಆಂದೋಲನದ ಸೈನಿಕರು ಪೌರ ಕಾರ್ಮಿಕರು. ಅವರ ಬದುಕಿನಲ್ಲಿ ಮಾರ್ಪಾಡಾದಾಗ ಮಾತ್ರ ಶುಚಿತ್ವ ಆಂದೋಲನ ಯಶಸ್ವಿಯಾಗುತ್ತದೆ. ಮೋದಿಯವರು ಆಂದೋಲನವನ್ನು ಆರಂಭಿಸಿದಾಗ ಕನಿಷ್ಠ, ಪೌರಕಾರ್ಮಿಕರಿಗೆ ಶುಚಿಗೊಳಿಸಲು ಬೇಕಾದ ಆಧುನಿಕ ಸಲಕರಣೆಗಳು ದೊರಕಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಅದು ನಿರೀಕ್ಷೆಯಾಗಿಯೇ ಉಳಿದಿದೆ. ಇಂದಿಗೂ ಒಳಚರಂಡಿಗಳಿಗೆ ಕಾರ್ಮಿಕರು ಕೈಗವಸು, ಮುಖಗವಸುಗಳಿಲ್ಲದೆಯೇ ಇಳಿದು ಮರಣವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

ದುಡಿಯುವ ಕಾರ್ಮಿಕರಿಗೆ ಈ ಕೈಗವಸು, ಕಾಲಿನ ಗವಸು ಸಿಗದೇ ಇದ್ದರೂ, ಲೆಕ್ಕ ಪತ್ರಗಳಲ್ಲಿ ಮಾತ್ರ ಇಂತಹ ಸಲಕರಣೆಗಳಿಗೆ ಮಾಡಿದ ವೆಚ್ಚ ದಾಖಲಾಗಿರುತ್ತದೆ. ದೇಶದಲ್ಲಿ ಹಿಂದೆಂದಿಗಿಂತಲೂ ಅಧಿಕ ಮಾನವ ಹಕ್ಕು ಉಲ್ಲಂಘನೆಗಳಾಗುತ್ತಿವೆ ಎಂದು ಅಮೆರಿಕ ಸರಕಾರದ ವಾರ್ಷಿಕ ವರದಿಯೊಂದು ಹೇಳಿದೆ.ದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಂಧನಗಳು, ದೌರ್ಜನ್ಯಗಳನ್ನು ಉಲ್ಲೇಖಿಸಿ ಈ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಆದರೆ 2018ರಿಂದೀಚೆಗೆ ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೂ ವಿಪರೀತ ಮಟ್ಟಕ್ಕೆ ತಲುಪಿವೆ. ಒಂದೆಡೆ ದಲಿತ ದೌರ್ಜನ್ಯಗಳು ಹೆಚ್ಚುತ್ತಿರುವಂತೆಯೇ ಅವರ ಪರವಾಗಿರುವ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲ ಮೇಲ್‌ಜಾತಿಯ ಜನರು ರಾಜಕೀಯವಾಗಿ, ಸಾಮಾಜಿಕವಾಗಿ ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. 2018ರ ಬಳಿಕ ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ 1,89,945 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗ ಪಡಿಸಿರುವ ಅಂಕಿಗಳು.

ಒಳಚರಂಡಿಗಳಲ್ಲಿ ದಲಿತ ಕಾರ್ಮಿಕರನ್ನು ಯಾವುದೇ ಅತ್ಯಾಧುನಿಕ ಸಲಕರಣೆಗಳಿಲ್ಲದೆ ಇಳಿಸುವುದು ಕೂಡ ಅವರ ಮೇಲೆ ನಡೆಯುವ ದೌರ್ಜನ್ಯಗಳು ಎಂದು ನಮ್ಮ ಸರಕಾರ ಭಾವಿಸಿದ್ದೇ ಇಲ್ಲ. ಇವುಗಳನ್ನು ಮಾನವಹಕ್ಕು ಉಲ್ಲಂಘನೆಯ ವ್ಯಾಪ್ತಿಯಲ್ಲಿ ತಂದಾಗ ಇಂತಹ ಪ್ರಕರಣಗಳಲ್ಲಿ ಸಂಭವಿಸುವ ಸಾವು ನೋವುಗಳ ಬಗ್ಗೆ ಸಮಾಜ ಗಂಭೀರವಾಗಿ ಯೋಚಿಸಬಹುದು. ಒಳಚರಂಡಿಯನ್ನು ಶುಚಿಗೊಳಿಸುವುದು ಎಲ್ಲ ಶ್ರಮದ ಕೆಲಸಗಳಂತೆಯೇ ಒಂದು ಎಂದು ಭಾವಿಸುವುದರಲ್ಲೇ ತಪ್ಪಿದೆ. ಇಲ್ಲಿ ಕಾರ್ಮಿಕನ ಜೊತೆಗೆ ಮನುಷ್ಯನ ಘನತೆಯನ್ನು ಕೂಡ ಆ ಚರಂಡಿಯೊಳಗೆ ಇಳಿಸಲಾಗುತ್ತದೆ. ಇದು ಎಲ್ಲ ಕೆಲಸಗಳಂತೆಯೇ ಒಂದಾಗಿದ್ದರೆ ಯಾಕೆ ನಿರ್ದಿಷ್ಟ ಸಮುದಾಯವನ್ನೇ ಈ ಕೆಲಸಕ್ಕಾಗಿ ಬಳಸಲಾಗುತ್ತದೆ? ಈ ಸಮುದಾಯಕ್ಕೆ ಸಮಾಜ ನೀಡುತ್ತಿರುವ ಗೌರವವೇನು? ಇದು ತಿಳಿಯದಷ್ಟು ಮುಗ್ಧವಲ್ಲ ಸರಕಾರ. ಆದುದರಿಂದಲೇ, ಎಲ್ಲಿಯವರೆಗೆ ಒಳಚರಂಡಿಯನ್ನು ಶುಚಿಗೊಳಿಸಲು ಸರಕಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ, ಗರಿಷ್ಠ ಮುಂಜಾಗ್ರತೆಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು.

ಯಾವುದೇ ಅವಘಡಗಳಾದರೆ, ತಕ್ಷಣ ಆ ಘಟನೆಗೆ ಸಂಬಂಧಿಸಿ ಅಧಿಕಾರಿಗಳನ್ನು ವಜಾಗೊಳಿಸಬೇಕು. ಯಾವನೇ ಕಾರ್ಮಿಕ ಮೃತಪಟ್ಟರೂ ಅವನಿಗೆ ಹುತಾತ್ಮ ಯೋಧನಿಗೆ ನೀಡಿದ ಗೌರವವನ್ನೇ ಸರಕಾರ ನೀಡಬೇಕು. ಯಾಕೆಂದರೆ, ಪೌರ ಕಾರ್ಮಿಕ ಒಬ್ಬ ಸೈನಿಕನಂತೆಯೇ ಈ ನಾಡಿನ ಒಳಿತಿಗಾಗಿ ತನ್ನ ಬದುಕನ್ನು ಬಲಿ ಅರ್ಪಿಸಿರುತ್ತಾನೆ. ಆತನ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ಸಿಗುವಂತಾಗಬೇಕು. ಜೊತೆಗೆ, ಮೃತನ ಕುಟುಂಬದ ಮಕ್ಕಳು ಸಮಾಜದಲ್ಲಿ ಘನತೆಯಿಂದ ಬದುಕುವಂತಾಗಲು ಅವರಿಗೆ ಸಂಪೂರ್ಣ ಉಚಿತ ಶಿಕ್ಷಣ, ಆರೋಗ್ಯವನ್ನು ಒದಗಿಸಬೇಕು. ಇಷ್ಟು ಸಾಧ್ಯವಾಗದೇ ಇದ್ದರೆ, ಒಳಚರಂಡಿಗಳಿಗೆ ಆಯಾ ಇಲಾಖೆಯ ಅಧಿಕಾರಿಗಳನ್ನೇ ದುಪ್ಪಟ್ಟು ವೇತನ ಕೊಟ್ಟು ಇಳಿಸುವುದು ಸರಿಯಾದ ಕ್ರಮ.

Similar News