ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್‌ ಗಾಂಧಿ ಮುಂದೆ ಇರುವ ಆಯ್ಕೆಗಳು ಯಾವುವು?

Update: 2023-03-24 13:50 GMT

ಹೊಸದಿಲ್ಲಿ: ಮಾನಹಾನಿ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯದಿಂದ ದೋಷಿಯೆಂದು ಘೋಷಿತರಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ (Disqualification). ಜನಪ್ರತಿನಿಧಿತ್ವ ಕಾಯಿದೆ 1951 ಇದರ ಸೆಕ್ಷನ್‌ 8(3) ಪ್ರಕಾರ ದೋಷಿಯೆಂದು ಘೋಷಿತರಾಗಿ ಎರಡು ವರ್ಷಕ್ಕೆ ಕಡಿಮೆಯಿಲ್ಲದಂತೆ ಜೈಲು ಶಿಕ್ಷೆ ವಿಧಿಸಲ್ಪಟ್ಟವರು  ಲೋಕಸಭಾ ಸದಸ್ಯತ್ವ ಕಳೆದುಕೊಳ್ಳುತ್ತಾರೆ.

ಅವರು ಇನ್ನು ಮುಂದೆ ಸಂಸದರಾಗಿ ಉಳಿದಿಲ್ಲ ಎಂದು ಲೋಕಸಭಾ ಸೆಕ್ರಟೇರಿಯಟ್‌ ಇಂದು ಘೋಷಿಸಿದೆ. ಅವರ ಕ್ಷೇತ್ರ ಖಾಲಿಯಿದೆ ಎಂದೂ ಘೋಷಿಸಲಾಗಿದೆ. ಈ ಕ್ಷೇತ್ರಕ್ಕೆ ವಿಶೇಷ ಚುನಾವಣೆಯನ್ನೂ ಚುನಾವಣಾ ಆಯೋಗ ಘೋಷಿಸಬಹುದಾಗಿದೆ ಹಾಗೂ ದಿಲ್ಲಿಯಲ್ಲಿರುವ ಅವರ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆಯೂ ಗಾಂಧಿ ಅವರಿಗೆ ಕೇಂದ್ರ ಕೇಳಬಹುದಾಗಿದೆ.

ರಾಹುಲ್‌ ಮುಂದೇನು ಮಾಡಬಹುದೆಂಬ ಪ್ರಶ್ನೆಯಿದೆ. ಅವರು ಸೂರತ್‌ ಕೋರ್ಟ್‌ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ.

ಸಂಸದರನ್ನು ಲೋಕಸಭಾ ಸೆಕ್ರಟೇರಿಯಟ್‌ ಅನರ್ಹಗೊಳಿಸುವ ಹಾಗಿಲ್ಲ, ಚುನಾವಣಾ ಆಯೋಗದ ಜೊತೆ ಚರ್ಚೆ ನಡೆಸಿ ರಾಷ್ಟ್ರಪತಿಗಳು ಈ ಕ್ರಮ ಕೈಗೊಳ್ಳಬಹುದು ಎಂದು ಕಾಂಗ್ರೆಸ್‌ ನಾಯಕರು ವಾದಿಸುತ್ತಿದ್ದಾರೆ, ಆದರೆ ಇದನ್ನು ಬಿಜೆಪಿ ಒಪ್ಪುತ್ತಿಲ್ಲ.

ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಕಪಿಲ್‌ ಸಿಬಲ್‌ ಪ್ರತಿಕ್ರಿಯಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿರುವುದರಿಂದ ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ನ್ಯಾಯಾಲಯ ಅವರ ಶಿಕ್ಷೆಯನ್ನು ವಜಾಗೊಳಿಸಿದರೆ ಸಾಲದು ಅವರು ದೋಷಿ ಎಂದು ನೀಡಿದ ಆದೇಶಕ್ಕೆ ತಡೆ ಹೇರಬೇಕಿದೆ. ಹಾಗಿದ್ದಲ್ಲಿ ಮಾತ್ರ ಅವರು ಸಂಸದರಾಗಿ ಮುಂದುವರಿಯಬಹುದು. ಉನ್ನತ ನ್ಯಾಯಾಲಯ ಈ ತೀರ್ಪನ್ನು ರದ್ದುಗೊಳಿಸದೇ ಇದ್ದರೆ  ಅವರು ಮುಂದಿನ ಎಂಟು ವರ್ಷ ಚುನಾವಣೆ ಸ್ಪರ್ಧಿಸುವ ಹಾಗಿಲ್ಲ ಎಂದು ಸಿಬಲ್‌ ಹೇಳಿದ್ದಾರೆ.

ರಾಹುಲ್‌ ಅವರು ಸೂರತ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮೇಲಿನ ಹಂತದ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ: ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೈಕಮಾಂಡ್ ಗೆ ಹೇಳಿದ್ದೇನೆ: ಸಿದ್ದರಾಮಯ್ಯ

Similar News