ಹಿಂಡೆನ್‌ಬರ್ಗ್‌ನ ಇತ್ತೀಚಿನ ವರದಿಯಲ್ಲಿ ಭಾರತೀಯ ಮೂಲದ ಅಧಿಕಾರಿಯ ಹೆಸರು ಉಲ್ಲೇಖ

Update: 2023-03-24 11:42 GMT

ವಾಷಿಂಗ್ಟನ್: ಅಮೆರಿಕಾದ ಹೂಡಿಕೆ ಸಮೂಹವಾದ ಹಿಂಡೆನ್‌ಬರ್ಗ್ (Hindenburg) ಸಂಶೋಧನಾ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಜಾಕ್ ಡಾರ್ಸಿಯ ಮೊಬೈಲ್ ಪಾವತಿ ಘಟಕ 'ಬ್ಲಾಕ್'  ತನ್ನ ಬಳಕೆದಾರರ ಸಂಖ್ಯೆಯನ್ನು ಉತ್ಪ್ರೇಕ್ಷಿತವಾಗಿ ದಾಖಲಿಸಿದೆ ಎಂದು ಹೇಳಿದ್ದು, ಈ ಘಟಕದ ಮುಖ್ಯ ಹಣಕಾಸು ಅಧಿಕಾರಿ ಅಮೃತಾ ಅಹುಜಾರ (Amrita Ahuja) ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿದೆ ಎಂದು ndtv.com ವರದಿ ಮಾಡಿದೆ.

ಅಮೃತಾ ಅಹುಜಾ ಅವರು ಬ್ಲಾಕ್ ಸಂಸ್ಥೆಯ ಹಾಲಿ ಮುಖ್ಯ ನಿರ್ವಾಹಕ ಅಧಿಕಾರಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ. ಅಲ್ಲದೆ ಅವರು Discord ಹಾಗೂ Airbnb ಸಂಸ್ಥೆಗಳ ನಿರ್ದೇಶಕರ ಮಂಡಳಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ಕ್ರೀಡೆಗಳ ಅಭಿವೃದ್ಧಿ ಹಾಗೂ ಪ್ರಕಾಶಕ ಸಂಸ್ಥೆಯಾದ ಬ್ಲಿಝಾರ್ಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಲ್ಲೂ ಅಮೃತಾ ಅಹುಜಾ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, 2018ರಲ್ಲಿ ಸ್ಕ್ವೇರ್ ಇಂಕ್ ಸಂಸ್ಥೆಯಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಅಮೃತಾ ಅಹುಜಾ ಅವರಿಗೆ ನೀಡಲಾಗಿತ್ತು. ನಂತರ ಅದಕ್ಕೆ ಬ್ಲಾಕ್ ಎಂದು ಮರು ನಾಮಕರಣ ಮಾಡಲಾಗಿತ್ತು. 

ಅಮೃತಾ ಅಹುಜಾ ಅವರ ಪೋಷಕರು ಭಾರತದಿಂದ ವಲಸೆ ಬಂದವರಾಗಿದ್ದಾರೆ. ಅಹುಜಾ ಓಹಿಯೊದ ಕ್ಲೀವ್‌ಲ್ಯಾಂಡ್‌ನಲ್ಲಿ ಡೇಕೇರ್ ಸೆಂಟರ್ ಒಂದನ್ನು ನಡೆಸುತ್ತಿದ್ದರು. ಸಣ್ಣ ವ್ಯಾಪಾರಗಳನ್ನು ಸುಸ್ಥಿರಗೊಳಿಸುತ್ತಿದ್ದ ಕಾರಣದಿಂದ ನಾನು ಸ್ಕ್ವೇರ್ ಇಂಕ್‌ಗೆ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇರ್ಪಡೆಯಾದೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದಕ್ಕೂ ಮುನ್ನ ಅಹುಜಾ ಅವರು ಡಿಸ್ನಿ ಹಾಗೂ ಫಾಕ್ಸ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಇದಲ್ಲದೆ ಮೊರ್ಗನ್ ಸ್ಟ್ಯಾನ್ಲಿಯಲ್ಲಿ ಬ್ಯಾಂಕಿಂಗ್ ಹೂಡಿಕೆ ವಿಶ್ಲೇಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪೂರೈಸಿದ ಅಮೃತಾ ಅಹುಜಾ, ನಂತರ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕೆ 'ದಿ ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್' ಕಾಲೇಜಿನ ವಿದ್ಯಾರ್ಥಿ ಕೂಡಾ ಆಗಿದ್ದಾರೆ.

ಇದನ್ನೂ ಓದಿ: ಹಿಂಡೆನ್‌ಬರ್ಗ್‌ ನೂತನ ವರದಿ ಬಳಿಕ ಜಾಕ್‌ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

Similar News