ಪಾನ್‌ಕಾರ್ಡ್ ದಂಡದ ಹೆಸರಿನಲ್ಲಿ ಲೂಟಿ: ರಮೇಶ್ ಕಾಂಚನ್ ಆಕ್ರೋಶ

Update: 2023-03-24 13:39 GMT

ಉಡುಪಿ, ಮಾ.24: ಪಾನ್‌ಕಾರ್ಡನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಮಾ.31ರವರೆಗೆ 1,000ರೂ. ಬಳಿಕ 10,000ರೂ. ದಂಡವನ್ನು ಬಡ ಜನರಿಂದ ಲೂಟಿ ಮಾಡುತ್ತಿರುವ ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾನ್‌ಕಾರ್ಡನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ನಿರ್ಧಿರಿಸಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ದಂಡದ ರೂಪದಲ್ಲಿ ದುಬಾರಿ ಹಣವನ್ನು ಜನಸಾಮಾನ್ಯರಿಂದ ದೋಚಿ ಅದರಿಂದ ಲಾಭ ಮಾಡಿಕೊಳ್ಳುವ ಕೇಂದ್ರ ಸರಕಾರ ಬಡವರ ಹಾಗೂ ಮಧ್ಯಮ ವರ್ಗದ ಜನರನ್ನು ಯಾವ ರೀತಿ ಲೂಟಿ ಮಾಡುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಜನರಿಗೆ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಸೂಚಿಸುವುದನ್ನು ಬಿಟ್ಟು ದುಬಾರಿ ದಂಡವನ್ನು ವಸೂಲಿ ಮಾಡಿ ಈ ಮೂಲಕ ಮುಂದಿನ ಚುನಾವಣೆಗೆ ಹಣ ಸಂಗ್ರಹಿಸಲು ಒಂದು ದಾರಿ ಮಾಡಿಕೊಟ್ಟಂತಿದೆ. ಈಗಾಗಲೇ ಜಿ.ಎಸ್.ಟಿ ಹೆಸರಿನಲ್ಲಿ ಲೂಟಿ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಂಡಿರುವ ಬಿಜೆಪಿ ಸರಕಾರ ಮತ್ತೆ ಪಾನ್‌ಕಾರ್ಡ್ ಹೆಸರಿನಲ್ಲಿ ದೋಚಲು ಹೊರಟಿದೆ.

ತೆರಿಗೆ, ಬೆಲೆಏರಿಕೆ ಎಂದು ದಿನನಿತ್ಯ ಕಷ್ಟ ಅನುಭವಿಸುತ್ತಿರುವ ದೇಶದ ಜನರು ಮತ್ತೆ ಪಾನ್‌ಕಾರ್ಡ್ ಮೂಲಕ ದಂಡ ಕಟ್ಟಬೇಕಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಮ್ಮ ಸಂಸದರು ಇಂತಹ ವಿಚಾರಗಳು ಬಂದಾಗ ಮೌನಕ್ಕೆ ಶರಣಾಗುವುದನ್ನು ಬಿಟ್ಟು ಜನರ ಪರ ನಿಲ್ಲಬೇಕು. ಇಂತಹ ಜನವಿರೋಧಿ ನೀತಿಗಳನ್ನು ಬಿಜೆಪಿ ಸರಕಾರವು ಅನುಷ್ಠಾನಕ್ಕೆ ತಂದರೆ ಜನರು ಈ ಬಿಜೆಪಿ ಸರಕಾರದ ವಿರುದ್ಧ ರೊಚ್ಚಿಗೇಳುವ ದಿನ ದೂರವಿಲ್ಲ ಎಂದು ರಮೇಶ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.

Similar News